ಹಾಸ್ಟೆಲ್ ಹೊರಗುತ್ತಿಗೆ  ಕಾರ್ಮಿಕರ ವೇತನಕ್ಕಾಗಿ ಬಳ್ಳಾರಿ ಜಿಲ್ಲೆಗೆ 1 ಕೋಟಿ 34 ಲಕ್ಷ ಬಾಕಿ ಹಣ ಬಿಡುಗಡೆ.
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.25: ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಡಿಗೆ , ಅಡಿಗೆ ಸಹಾಯಕ, ಕಾವಲುಗಾರ ಸಿಬ್ಬಂದಿಗಳಿಗೆ 6-7 ತಿಂಗಳುಗಳ ಬಾಕಿ ವೇತನ ಪಾವತಿ ಮಾಡುವಂತೆ ಎ.ಐ.ಯು.ಟಿ.ಯು.ಸಿ ಸಂಯೋಜಿತ *ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ* ಬಳ್ಳಾರಿಯಲ್ಲಿಯೂ ಸೇರಿದಂತೆ  ಜಿಲ್ಲಾಮಟ್ಟದಲ್ಲಿ ಪ್ರತಿಭಟನೆಗಳು, ಅಡುಗೆ ಬಂದ್ ಚಳುವಳಿ,  ಧರಣಿ ಹಾಗೂ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ನಿರಂತರ ಭೇಟಿ,  ಹೀಗೆ ಹಲವಾರು ರೀತಿಯಲ್ಲಿ ಒತ್ತಡ ಹೇರುತ್ತಾ.  ಬರಲಾಗಿತ್ತು. ಹಾಸ್ಟೆಲ್ ಕಾರ್ಮಿಕರ ಹೋರಾಟಕ್ಕೆ ಮಣಿದಿರುವ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ದಿನಾಂಕ 21.05.2024 ರಂದು ಹೊರಗುತ್ತಿಗೆ ಅಡಿಗೆ, ಅಡಿಗೆ ಸಹಾಯಕ, ಕಾವಲುಗಾರ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನ ಪಾವತಿಗಾಗಿ ರೂಪಾಯಿ 40.00 ಕೋಟಿ ಅನುದಾನವನ್ನು  ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. . ಇದರ ಭಾಗವಾಗಿ ಬಳ್ಳಾರಿ ಜಿಲ್ಲೆಗೆ 1 ಕೋಟಿ 34 ಲಕ್ಷದ 68 ಸಾವಿರ (1,34,68,000/-) ಹಣ ಬಂದಿದೆ.
 ಈ ಹಿನ್ನೆಲೆಯಲ್ಲಿ ಮೇಲಿನ ಹಣವನ್ನು ಉಪಯೋಗಿಸಿಕೊಂಡು ತಕ್ಷಣವೇ ಕಾರ್ಮಿಕರಿಗೆ ಬಾಕಿ ಇರುವ ವೇತನವನ್ನು ಮತ್ತು ಬಾಕಿ ಇರುವ  ಅರಿಯರ್ಸ್ ನೀಡಬೇಕೆಂದು ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು  ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. 
 ನಿಯೋಗದಲ್ಲಿ ಜಿಲ್ಲಾ ಕಾರ್ಯದರ್ಶಿ ಸುರೇಶ್., ಜಂಟಿ ಕಾರ್ಯದರ್ಶಿ ಚೇತನ್, ಇತರ ಮುಖಂಡರಾದ ರವಿ, ಪ್ರವೀಣ್, ವೀರೇಶ್, ಯರೇಪ್ಪ ಮುಂತಾದವರು ಇದ್ದರು.