ನಿರ್ಲಕ್ಷ್ಯ ತೋರುತ್ತಿರುವ ಪಶುವೈದ್ಯರ ಮೇಲೆ ಸೂಕ್ತ ಕ್ರಮಕ್ಕಾಗಿ ಆಗ್ರಹ
ಚಿಂಚೋಳಿ,ಸೆ.೨೪- ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಪಶು ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಶು ವೈದ್ಯರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ, ಕರ್ತವ್ಯಕ್ಕೆ ಹಾಜರಾಗದ, ಅಸಮರ್ಥ ಪಶು ವೈದ್ಯರ ಮೇಲೆ ಮತ್ತು ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಬಹುಜನ್ ಸ್ಟೂಡೆಂಟ್ ಫೆಡರೇಷನ್ ಫಾರ್ ಇಕ್ವಾಲಿಟಿ ಸಂಘಟನೆ ಒತ್ತಾಯಿಸಿದೆ.
ಸಂಘಟಯ ಚಿಂಚೋಳಿ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ಪಶು ಆರೋಗ್ಯ ವೈದ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ತಾಲ್ಲೂಕಿನಲ್ಲಿರುವ ಕೆಲವೊಂದು ಪಶು ಆರೋಗ್ಯ ಕೇಂದ್ರಗಳಲ್ಲಿ ಪಶು ವೈದ್ಯರು ಸರಿಯಾದ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹಾಜರಾಗುವುದಿಲ್ಲ. ಅಲ್ಲದೇ, ಸರಕಾರದಿಂದ ಪಶುಗಳಿಗೆ ಉಚಿತವಾಗಿ ನೀಡುವ ಔಷಧಿಗಳನ್ನು ನೀಡಲಾಗುತ್ತಿಲ್ಲ.
ಈ ಆರೋಪz ಬಗ್ಗೆ ಕೇಳಿದಾಗ ನಮಗೆ ಸರಕಾರದಿಂದ ಯಾವುದೇ ಔಷಧಿಗಳನ್ನು ಪೂರೈಸಿರುವುದಿಲ್ಲ ಎನ್ನುವುದೊಂದೆ ಅವರು ಸದಾ ಕಾಲ ನೀಡಿಕೊಂಡು ಬರುತ್ತಿರುವ ಉತ್ತರವಾಗಿದೆ. ಅಲ್ಲದೆ ಇನ್ನುಳಿದ ಕೆಲವೊಂದು ಗ್ರಾಮಗಳಲ್ಲಿರುವ ಪಶು ಆರೋಗ್ಯ ಕೇಂದ್ರಗಳಿಗೆ ವೈದ್ಯರು ವಾರಗಟ್ಟಲೆ ಹಾಜರಾಗುವುದೇ ಇಲ್ಲ. ಇದನ್ನು ಕುರಿತು ಅಲ್ಲಿನ ಸಿಬ್ಬಂದಿಗಳಿಗೆ ಕೇಳಿದಾಗ ಅವರು, ಸಾಹೇಬ್ರು ಮೀಟಿಂಗ್ ಗೆ ಹೋಗಿದ್ದಾರೆ ಎನ್ನುವಂತಹ ಸುಳ್ಳನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಅಂತಹ ಪಶು ಆರೋಗ್ಯ ಕೇಂದ್ರದ ವೈದ್ಯರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ರೈತಾಪಿ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆಂದು ಬಹುಜನ್ ಸ್ಟೂಡೆಂಟ್ ಫೆಡರೇಷನ್ ಫಾರ್ ಇಕ್ವಾಲಿಟಿ ಸಂಘಟನೆಯ ಜಿಲ್ಲಾಧ್ಯಕ್ಷ ಮೋಹನ್ ಐನಾಪುರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮೂಲನಿವಾಸಿ ಕೂಲಿ ಕಬ್ಬಲಿಗ ಸಮಾಜದ ತಾಲ್ಲೂಕಾಧ್ಯಕ್ಷ ಮೌನೇಶ ಗಾರಂಪಳ್ಳಿ, ಪ್ರಧಾನ ಕಾರ್ಯದರ್ಶಿ ರಾಜು ತೋಡಿ ಚಿಮ್ಮಈದ್ಲಾಯಿ ಸೇರಿದಂತೆ ಇನ್ನಿತರರಿದ್ದರು.