ಸಡಗರ, ಸಂಭ್ರಮದ ಮಹಾಕೂಟೇಶ್ವರ ಮಹಾರಥೋತ್ಸವ
ಬಾದಾಮಿ,ಮೇ.25: ಸುಕ್ಷೇತ್ರ ದಕ್ಷಿಣ ಕಾಶಿ ಎಂದು ಕರೆಯುವ ಮಹಾಕೂಟೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ ಭಾವಗಳ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಮೇ 15 ರಿಂದ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿದ್ದು ಶುಕ್ರವಾರ ಬೆಳಿಗ್ಗೆಯಿಂದ ಮಹಾಕೂಟೇಶ್ವರನಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕವನ್ನು ಶಾಂತವೀರ ಶಾಸ್ತ್ರಿಗಳು ನೆರವೇರಿಸಿದರು.
ಮಹಾಕೂಟೇಶ್ವರ ಮಾಹಾರಥೋತ್ಸವಕ್ಕೆ ಸಾಂಪ್ರದಾಯಿಕವಾಗಿ ರಥಾಂಗ ಹೋಮ ಹಾಗೂ ಪೂಜೆ ನೆರವೇರಿಸಿದ ನಂತರ ಯಂಕಂಚಿ-ಮಣಿನಾಗರ ಗ್ರಾಮದಿಂದ ಕಳಸ ಹಾಗೂ ಹಗ್ಗವನ್ನು ಭಾರಿ ಮೆರವಣಿಗೆ ಮೂಲಕ ತಂದ್ದು ಹಗ್ಗದಿಂದ ರಥ ಎಳೆಯಲಾಯಿತು. ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣುಗಳನ್ನು ಭಕ್ತರು ಸಮರ್ಪಿಸಿ ಭಕ್ತಿ ಪರಾಕಾಷ್ಟೆ ಮೆರೆದರು. ಮಹಾರಥೋತ್ಸವದಲ್ಲಿ ಮಾಜಿ ಶಾಸಕÀ ಎಂ.ಕೆ.ಪಟ್ಟಣಶೆಟ್ಟಿ, ಮುಖಂಡರಾದ ಎಂ.ಬಿ.ಹಂಗರಗಿ, ಮಹೇಶ ಹೊಸಗೌಡ್ರ, ಮಹಾಕೂಟೇಶ್ವರ ದೇವಸ್ಥಾನದ ಕಮಿಟಿಯ ಚೇರಮನ್ ಕುಮಾರಗೌಡ ಜನಾಲಿ, ಸಿದ್ದನಗೌಡ ಪಾಟೀಲ, ಕುಮಾರ ರೋಣದ, ಸಿದ್ದಯ್ಯ ಹಿರೇಮಠ, ಶಿವುಕುಮಾರ ಹಿರೇಮಠ, ಶೇಖಣ್ಣ ಹಂಗರಗಿ, ಮುಕ್ಕಣ್ಣ ಜನಾಲಿ, ಸಿದ್ದು ಹಂಗರಗಿ, ಪ್ರಕಾಶ ಮಾಳಕೋಟಗಿ ಸೇರಿದಂತೆ ಬಾಗಲಕೋಟ, ವಿಜಯಪೂರ, ಗದಗ ಸೇರಿದಂತೆ ರಾಜ್ಯದ ವಿವಿದ ನಗರಗಳಿಂದ ಸಹಸ್ರಾರು ಅಸಂಖ್ಯಾತ ಭಕ್ತರು ಮಹಾರಥೋತ್ಸವದಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ವಿವಿದ ನಗರ, ಗ್ರಾಮೀಣ ಭಾಗದಿಂದ ಪಾದಯಾತ್ರೆ, ವಾಹನಗಳ ಮೂಲಕ ಸುಕ್ಷೇತ್ರಕ್ಕೆ ಆಗಮಿಸಿ, ಮಹಾಕೂಟೇಶ್ವರ ದರ್ಶನ ಪಡೆದರು. ಪಾದಯಾತ್ರಿಗಳಿಗೆ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಸೂಕ್ತ ಬಂದೊಬಸ್ತ್; ಮುಂಜಾಗೃತಾ ಕ್ರಮವಾಗಿ ಪೊಲೀಸ್ ಇಲಾಖೆ ಸೂಕ್ತ ಬಂದೊ ಬಸ್ತ್ ಕೈಗೊಂಡಿದ್ದರು. ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‍ಐ. ವಿಠ್ಠಲ ನಾಯಕ, ಮತ್ತು ಬಾಗಲಕೋಟದಿಂದ ಆಗಮಿಸಿದ ಪೋಲಿಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.