ಬೆಳವಡಿ ಶ್ರೀ ವೀರಭದ್ರೆಶ್ವರ ರಥೋತ್ಸವ
ಮಲ್ಲಮ್ಮನ ಬೆಳವಡಿ,ಮೇ25 : ಐತಿಹಾಸಿಕ ಗ್ರಾಮ ಮಲ್ಲಮ್ಮನ ಬೆಳವಡಿಯ ಜಾಗೃತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವವು ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಗುರುವಾರ ಸಡಗರ-ಸಂಭ್ರಮದಿಂದ ನಡೆಯಿತು.
ಗ್ರಾಮದ ಸಾಂಪ್ರದಾಯಿಕ ಪಾಳಿ ಪದ್ಧತಿಯಂತೆ ಇಲ್ಲಿನ 4ನೇ ವಾರ್ಡಿನ ಭಕ್ತ ವೃಂದ ಜಾತ್ರೆಯ ಸಕಲ ಉಸ್ತುವಾರಿ ವಹಿಸಿಕೊಂಡಿದ್ದರು. ಬೆಳವಡಿ ಸಂಸ್ಥಾನದ ರಾಜಗುರುಗಳಾದ ಹೂಲಿಯ ಶ್ರೀ ಶಿವಸಿದ್ಧರಾಮೇಶ್ವರ ಶ್ರೀಗಳು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಧಾರಾಕಾರ ಸುರಿದ ಮಳೆ ಕೆಲ ಹೊತ್ತು ರಥೋತ್ಸವಕ್ಕೆ ಅಡಚಣೆ ಉಂಟು ಮಾಡಿದರೂ ಮಳೆ ನಿಂತ ಬಳಿಕ ಸರಾಗವಾಗಿ ಜರುಗಿತು. ಶ್ರೀ ವೀರಭದ್ರೇಶ್ವರ ತೇರಿಗೆ ತೆಂಗು, ಬಾಳೆ, ಕಬ್ಬು, ಬಣ್ಣ ಬಣ್ಣದ ಪರಪರಿ ಹಾಗೂ ವಿವಿಧ ಹೂಗಳಿಂದ ಶೃಂಗರಿಸಲಾಗಿತ್ತು. ಈ ನಿಮಿತ್ತ ಶ್ರೀ ವೀರಭದ್ರೇಶ್ವರ ಕರ್ತೃ ಗದ್ದುಗೆಗೆ ಬೆಳಿಗ್ಗೆ ಮಹಾ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು. ತೇರು ಎಳೆಯುವ ವೇಳೆ ಭಕ್ತರು ರಥಕ್ಕೆ ಬಾಳೆ ಹಣ್ಣು, ಖಾರಿಕು ಎಸೆದು ಭಕ್ತಿ ಭಾವ ಮೆರೆದರು.
ಶ್ರೀ ವೀರಭದ್ರೇಶ್ವರ ಮಹಾರಾಜ ಕೀ ಜೈಘೋಷಗಳೊಂದಿಗೆ ರಥೋತ್ಸವದಲ್ಲಿ ಸಂಭ್ರಮಿಸಿದರು. ಬೆಳವಡಿ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೂ, ಕಾಯಿ, ಹಣ್ಣು, ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆದರು. ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜಾಗೃತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ 4 ನೇ ವಾರ್ಡಿನ ಕಮಿಟಿ ಸದಸ್ಯರು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.