ಮಾಧ್ಯಮಗಳ ಆತ್ಮಾವಲೋಕನದ ಕಾಲವಿದು: ಉಗಮಶ್ರೀ
ತುಮಕೂರು, ಮೇ ೨೫- ಸಾಮಾಜಿಕ ಕಳಕಳಿ ಇರುವ ಸುದ್ದಿಗಳನ್ನು ಬದಿಗೊತ್ತಿ ರಂಜನೀಯ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿರುವುದರಿಂದ ಪತ್ರಿಕೋಧ್ಯಮದ ನೈತಿಕತೆ ಎತ್ತ ಸಾಗುತ್ತಿದೆ ಎಂದು ಪತ್ರಕರ್ತರೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪತ್ರಕರ್ತ ಉಗಮ ಶ್ರೀನಿವಾಸ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಮಾಧ್ಯಮಗಳಿಂದ ಸಾಮಾಜಿಕ ಪರಿವರ್ತನೆ ಹೇಗೆ ಸಾಧ್ಯ ’ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜಮುಖಿ ಪತ್ರಿಕೆಗಳು ಜನಮಾನಸದಲ್ಲಿ ಕೊನೆಯವರೆಗೂ ಉಳಿಯುತ್ತವೆ. ಕೇವಲ ರಂಜನೀಯ ಸುದ್ದಿಗಳಿಗೆ ಮಹತ್ವ ಕೊಡುವ ಮಾಧ್ಯಮಗಳು ಆ ಸಮಯಕ್ಕಷ್ಟೇ ಸೀಮಿತವಾಗಿ, ನಂತರ ಕಣ್ಮರೆಯಾಗುತ್ತವೆ. ಪುಟ ತುಂಬಿಸಲು ಸುದ್ದಿ ಮಾಡುವ, ಸ್ಲಾಟ್ ಪೂರ್ಣಗೊಳಿಸಲು ಸುದ್ದಿ ಬಿತ್ತರಿಸುವ ಯಾವುದೇ ಮಾಧ್ಯಮಗಳಿಗೂ ಭವಿಷ್ಯವಿಲ್ಲ ಎಂದರು.
ಪತ್ರಕರ್ತನಾದವನು ಯಾವುದೇ ಸುದ್ದಿಯನ್ನು ಗ್ರಹಿಸುವ, ನೋಡುವ ರೀತಿ ಮತ್ತು ಸುದ್ದಿಗೆ ನೀಡುವ ಕೋನ ವಿಭಿನ್ನವಾಗಿರಬೇಕು. ಪತ್ರಕರ್ತನ ಆಲೋಚನಾ ಕ್ರಮ ಬದಲಾಗಬೇಕು. ಸಮಾಜದ ಧ್ವನಿಯಾಗಿ, ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಸುದ್ದಿ ಮಾಡಿದಾಗ, ಗಮನಕ್ಕೆ ಬಾರದ, ಅಲಕ್ಷಿಸಿದ, ನಿರ್ಲಕ್ಷಿಸಿದ ಹತ್ತಾರು ಸಮಸ್ಯೆಗಳು ಸೂಕ್ತ ಅಧಿಕಾರಿಗಳಿಗೆ ತಲುಪಿ, ಎಚ್ಚೆತ್ತುಕೊಳ್ಳುವಂತಾಗುತ್ತದೆ ಎಂದರು.
ದಿನ ಪತ್ರಿಕೆಗಳನ್ನು ಎರಡು ನಿಮಿಷ ಓದುವ ಕಾಲ ಇದಾಗಿರುವುದು ಅಸಂಭವನೀಯ. ರೀಲ್ಸ್ ಯುಗದಲ್ಲಿ ಒಂದು ಬರಹವನ್ನು ಪ್ರಸರಣ ಮಾಡುವುದು ಸವಾಲಾಗಿದೆ. ಸಾಮಾಜಿಕ ಜಾಲತಾಣಗಳು ಜನಸಾಮಾನ್ಯರ ಮಾಧ್ಯಮವಾಗಿದೆ. ಮಾನವಾಸಕ್ತಿ ಸುದ್ದಿಗಳ ಕೊರತೆಯಿದೆ. ಸುದ್ದಿಗಳನ್ನು ಇತಿಹಾಸದ, ಪುರಾಣಗಳೊಂದಿಗೆ ಸಂಬಂಧ ಕಲ್ಪಿಸಿ ನೋಡಬೇಕಾಗಿದೆ. ಪ್ರಭುತ್ವದ ತಪ್ಪುಗಳನ್ನು ಮಣಿಸಲು ಮಾಧ್ಯಮದಿಂದ ಮಾತ್ರ ಸಾಧ್ಯ ಎಂಬುದನ್ನು ಪತ್ರಕರ್ತ ಅರಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಪತ್ರಕರ್ತನಾದವನು ಅಧ್ಯಯನಶೀಲನಾಗಬೇಕು. ಇತಿಹಾಸ ಮತ್ತು ಪ್ರಚಲಿತ ವಿದ್ಯಮಾನಗಳ ಜ್ಞಾನವಿರಬೇಕು. ಗ್ರಂಥಾಲಯವನ್ನು ಬಳಸಿಕೊಳ್ಳಬೇಕು. ವಿಷಯ ಪರಿಣಿತಿ ಹೊಂದಲು ಶಿಸ್ತು ಪಾಲಿಸಬೇಕು ಎಂದರು.
ಉಪನ್ಯಾಸ ವಿಷಯ ಕುರಿತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ವಿಷಯ ಮಂಡನೆ ಮಾಡಿದರು. ವಿದ್ಯಾರ್ಥಿಗಳು ತಯಾರಿಸಿರುವ ‘ಆಶಯ’ ಹೆಸರಿನ ಬಿತ್ತಿ ಪತ್ರಿಕೆ ಅನಾವರಣಗೊಳಿಸಲಾಯಿತು.
ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ.ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹರೀಶ್‌ಕುಮಾರ್ ಬಿ. ಸಿ., ಮನೋಜಕುಮಾರಿ ಬಿ., ಕಮಲಮ್ಮ ಎಸ್., ಸ್ನಾತಕೋತ್ತರ ವಿಭಾಗದ ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ಕೋಕಿಲ ಎಂ.ಎಸ್., ವಿನಯ್‌ಕುಮಾರ್ ಎಸ್. ಎಸ್., ತಾಂತ್ರಿಕ ಸಹಾಯಕ ಅಭಿಷೇಕ್ ಎಂ. ವಿ. ಮತ್ತಿತರರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಫಣೀಂದ್ರಕಶ್ಯಪ್ ಸ್ವಾಗತಿಸಿದರು. ಚಂದನ ವಂದಿಸಿದರು. ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.