ನಗರಸಭೆಯಿಂದ ಚರಂಡಿ ಸ್ವಚ್ಚತೆ ಕಾರ್ಯ
ಸಿರಾ, ಮೇ ೨೫- ಇತ್ತೀಚೆಗೆ ಸುರಿದ ಭಾರಿ ಮಳೆಗೆ ರಾ.ಹೆ.೨೩೪ರಿಂದ ಆರಂಭಗೊಳ್ಳುವ ಬಾಲಾಜಿನಗರದ ಪ್ರಮುಖ ರಸ್ತೆ ಸಮೀಪ ಅಂಗಡಿ ಮಳಿಗೆಗೆ ನುಗ್ಗಿದ್ದ ನೀರಿನ ವಿಡಿಯೋ ವೈರಲ್ ಆಗಿದ್ದು, ಎಚ್ಚೆತ್ತುಕೊಂಡ ನಗರಸಭಾ ಸದಸ್ಯರು ಈ ಭಾಗದಲ್ಲಿ ಚರಂಡಿ ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾದರು.
ರಾ.ಹೆ. ೨೩೪ರಲ್ಲಿ ನಿಂತ ನೀರು ಬಾಲಾಜಿನಗರ ಮುಖ್ಯ ರಸ್ತೆಯ ಪಕ್ಕದ ಸೆಲ್ಲರ್ ಅಂಗಡಿ ಮಳಿಗೆಗೆ ಮೆಟ್ಟಿಲಿನ ಮೇಲಿಂದ ಜಲಪಾತದಂತೆ ಧುಮುಕುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಭಾಗದ ಬಹುತೇತ ಚರಂಡಿಗಳು ಒತ್ತುವರಿ ಆಗಿದ್ದು, ಇರುವ ಕೆಲವೇ ಚರಂಡಿಗಳೂ ಕಸದಿಂದ ತುಂಬಿರುವ ಕಾರಣ ಮಳೆಯ ವೇಳೆ ಈ ಭಾಗದಲ್ಲಿ ಕೆರೆಯಂತೆ ನೀರು ಸಂಗ್ರಹಗೊಂಡಿತ್ತು. ಮುಂಗಾರು ಮಳೆಯೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಾಮಿನಿ ಸದಸ್ಯರ ಒತ್ತಾಯದ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಪೌರಾಯುಕ್ತ ರುದ್ರೇಶ್ ಯಂತ್ರಗಳ ಮೂಲಕ ಚರಂಡಿ ಸ್ವಚ್ಚಗೊಳಿಸುವ ಕೆಲಸ ನಡೆಸಿದರು. ನಾ
ಈ ಸಂದರ್ಭದಲ್ಲಿ ಸದಸ್ಯ ರಾಧಾಕೃಷ್ಣ, ಮುಖಂಡ ವಿಜಯರಾಜ್, ವಾಜರಹಳ್ಳಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.