ಪ್ರೇಕ್ಷಕರ ರಂಜಿಸಿದ ಭಾಸ ಭಾರತ ರಂಗ ಪ್ರಯೋಗ
ತುಮಕೂರು, ಮೇ ೨೫- ನಗರದ ಡಾ.ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ನಾಟಕಮನೆ ತುಮಕೂರು ರವರು ಆಯೋಜಿಸಿದಂತಹ ಕಲಾವಿದರಿಗೆ ರಂಗಗೌರವ ಹಾಗೂ ಮಹಾಕವಿ ಭಾಸನ ನಾಲ್ಕು ನಾಟಕಗಳ ಸಂಯೋಗವಿರುವ ಭಾಸ ಭಾರತರಂಗ ಪ್ರಯೋಗ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದವು.
ಭಾಸನ ನಾಟಕಗಳು ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ಆಧರಿಸಿವೆ. ಭಾಸನು ಕಾವ್ಯಗಳ ನಾಯಕರ ಪರ ಇದ್ದರೂ ವಿರೋಧಿಗಳನ್ನು ಬಲು ಸಹಾನುಭೂತಿಯಿಂದ ಕಾಣುತ್ತಾನೆ. ಅದಕ್ಕಾಗಿ ಅವನು ತಕ್ಕ ಮಟ್ಟಿಗೆ ಸ್ವಾತಂತ್ರ್ಯವನ್ನೂ ವಹಿಸುತ್ತಾನೆ. ಅವನ ನಾಟಕಗಳು ೨೦ನೇ ಶತಮಾನದಲ್ಲಿ ಬೆಳಕಿಗೆ ಬಂದರೂ ಅವುಗಳಲ್ಲಿ ಊರುಭಂಗ, ಕರ್ಣಭಾರ, ಧೂತಘಟೋತ್ಕಚ ಇನ್ನು ಅನೇಕ ನಾಟಕಗಳು ಇಂದಿನ ಅಭಿರುಚಿಗೆ ಹೊಂದುತ್ತಿರುವುದರಿಂದ ಜನಪ್ರಿಯವಾಗಿ ಭಾರತದ ಅನೇಕ ಭಾಷೆಗಳಲ್ಲಿ ಅನುವಾದಗೊಂಡು ಪ್ರದರ್ಶನಗೊಳ್ಳುತ್ತಿವೆ.
ಹಾಗಾಗಿ ಭಾಸನ ಕೃತಿಗಳು ಎಂದಿಗೂ ಪ್ರಸ್ತುತ. ಆತನ ರಚನೆಗಳೇ ವಿಭಿನ್ನ ಮತ್ತು ವಿಶಿಷ್ಟ. ಮಹಾಭಾರತ ಮಹಾಕಾವ್ಯವನ್ನು ತನ್ನದೇ ಶೈಲಿಯಲ್ಲಿ ವಿಶ್ಲೇಷಿಸುತ್ತಾ ಎಲ್ಲ ಕಾಲಕ್ಕೂ ಹೊಂದಿಸಿಕೊಳ್ಳುವಂತಹ ರಂಗ ಪಠ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅಂತಹ ಹಲವಾರು ರಚನೆಗಳಲ್ಲಿ ಮಧ್ಯಮ ವ್ಯಾಯೋಗ, ಧೂತಘಟೋತ್ಕಚ, ಕರ್ಣಭಾರ ಮತ್ತು ಊರುಭಂಗ ನಾಟಕಗಳನ್ನು ರಂಗಕ್ಕೆ ಸಂಯೋಗಿಸಿಕೊಂಡು ಒಂದು ವಿಶೇಷ ಅನುಭವವನ್ನು ನಾಟಕಮನೆ ತುಮಕೂರು ಕಲಾವಿದರು ಶಿವು ಹೊನ್ನಿಗನಹಳ್ಳಿರವರ ನಿರ್ದೇಶನದಲ್ಲಿ ಪ್ರೇಕ್ಷಕರಿಗೆ ನೀಡಿದರು.
ನೆರೆದಿದ್ದ ಪ್ರೇಕ್ಷಕರು ನಾಟಕದ ಮುಕ್ತಾಯದ ನಂತರ ಅತ್ಯಂತ ಸಂತೋಷದಿಂದ ಕಲಾವಿದರಿಗೆ ಅಭಿನಂದಿಸುತ್ತಿದ್ದು ಕಲಾವಿದರಿಗೆ ಸಾರ್ಥಕತೆಯ ಭಾವವಂತೂ ನಿಜ. ನಾಟಕದಲ್ಲಿ ಅಳವಡಿಸಲಾದ ಸಂಗೀತ, ವಿಶಿಷ್ಟ ರೀತಿಯ ವೇಷಭೂಷಣ, ರಂಗಸಜ್ಜಿಕೆ, ಕಲಾವಿದರ ನಟನೆ ಎಲ್ಲವೂ ಒಟ್ಟಾರೆಯಾಗಿ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.