ಎನ್‌ಪಿಎಸ್ ಜಾರಿ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ: ಪುಟ್ಟಣ್ಣ
ಮಧುಗಿರಿ, ಮೇ ೨೫- ಓಪಿಎಸ್ ತೆಗೆದು ಎನ್‌ಪಿಎಸ್ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡಿದ್ದು ಬಿಜೆಪಿ ಸರ್ಕಾರದ ಸಾಧನೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ವ್ಯಂಗ್ಯವಾಡಿದರು.
ಪಟ್ಟಣದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಜಾರಿಯಿಂದಾಗಿ ಶಿಕ್ಷಕರ ಪರಿಸ್ಥಿತಿ ಡೋಲಾಯಮಾನವಾಗಿದೆ. ಓಪಿಎಸ್ ಯೋಜನೆಯ ವ್ಯಾಪ್ತಿಗೆ ಅನುದಾನಿತ ಶಾಲೆಗಳ ಶಿಕ್ಷಕರುಗಳನ್ನು ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ೧೩೮ ದಿನಗಳ ಕಾಲ ಹೋರಾಟದಲ್ಲಿ ಶಿಕ್ಷಕರು ತೊಡಗಿದ್ದಾಗ ಬಿಜೆಪಿ ಸರ್ಕಾರದ ಮುಖಂಡರುಗಳು ಸೌಜನ್ಯಕ್ಕೂ ಭೇಟಿ ನೀಡಿ, ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದು ಆರೋಪಿಸಿದರು.
ರಾಜ್ಯದ ಪ್ರತಿ ಜಿಲ್ಲೆಯ ಶಿಕ್ಷಕರು ಈ ಹೋರಾಟದಲ್ಲಿ ತೊಡಗಿದ್ದಾಗ ಮೂವರು ಶಿಕ್ಷಕರು ಮೃತಪಟ್ಟರು ಮತ್ತೆ ಮೂವರು ಶಿಕ್ಷಕರು ಅಸ್ವಸ್ಥರಾದರು ಸಹ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಂದಿನ ಬಿಜೆಪಿ ಸರ್ಕಾರ ವಿಫಲವಾಗಿ ಶಿಕ್ಷಕರ ನೆರವಿಗೆ ಧಾವಿಸಲಿಲ್ಲ. ಸಭೆಯನ್ನು ಕೂಡಾ ನಡೆಸಲಿಲ್ಲ. ಇದರಿಂದ ಮನನೊಂದು ನಾನು ಅಂದೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದೆ. ಆ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಿಕ್ಷಕರನ್ನು ಭೇಟಿ ಮಾಡಿ ಧೈರ್ಯ ತುಂಬಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಇಂದಿನ ಬಿಜೆಪಿ ಅಭ್ಯರ್ಥಿಯು ಇವರ ಅನುದಾನವನ್ನು ಕೇವಲ ಖಾಸಗಿ ಶಾಲೆಗಳಿಗೆ ನೀಡಿದ್ದಾರೆ ಹೊರತು ಸರ್ಕಾರಿ ಶಾಲೆಗಳಿಗೆ ನೀಡುವಲ್ಲಿ ತಾರತಮ್ಯವೆಸಗಿದ್ದು ಬಿಜೆಪಿ ಅಭ್ಯರ್ಥಿಗೆ ಶಿಕ್ಷಕರ ಮತ ಕೇಳುವ ನೈತಿಕತೆಯೂ ಇಲ್ಲ, ಬದ್ಧತೆಯೂ ಇಲ್ಲವಾಗಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಶಿಕ್ಷಕರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಟಿ ಶ್ರೀನಿವಾಸ್ ರವರನ್ನು ಬೆಂಬಲಿಸಲಿದ್ದು ಹೆಚ್ಚು ಮತಗಳ ಅಂತರದಲ್ಲಿ ಜಯಶೀಲರಾಗಲಿದ್ದಾರೆ ಎಂದರು.
ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ ,ನಮ್ಮ ಕಾಂಗ್ರೆಸ್ ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿರುವಂತೆ ಪ್ರತಿ ವರ್ಷವೂ ಒಂದು ವರ್ಷಕ್ಕೆ ೬೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಿದ್ದು ೫ ವರ್ಷಗಳಲ್ಲಿ ೩ ಸಾವಿರ ಶಾಲೆಗಳ ನಿರ್ಮಾಣವಾಗಲಿದ್ದು ಬಡ ಹಾಗೂ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಲಿದೆ. ಇಂದಿನ ಬಿಜೆಪಿ ಅಭ್ಯರ್ಥಿ ೧೮ ವರ್ಷ ವಿಧಾನಪರಿಷತ್ ಸದಸ್ಯರಾಗಿದ್ದರು ಶಾಲೆಗಳ ಮೂಲಭೂತ ಸೌಕರ್ಯಗಳ ಕಡೆ ಗಮನಹರಿಸಿಲ್ಲ. ನಾನು ವಿಧಾನಪರಿಷತ್ ಸದಸ್ಯರಾದರೆ ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳ ಕಡೆ ಗಮನಹರಿಸಲಾಗುವುದು. ಅದೇ ರೀತಿ ೨೦೧೫ ರಿಂದ ಇಲ್ಲಿಯವರೆಗೂ ಅನುದಾನಿತ ಶಾಲೆಗಳ ಶಿಕ್ಷಕರ ಹುದ್ದೆಗಳ ಭರ್ತಿಗೆ ಅವಕಾಶ ಇಲ್ಲವಾಗಿದ್ದು ಮುಂದಿನ ದಿನಗಳಲ್ಲಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದಲ್ಲಿ ಹುದ್ದೆಗಳ ಭರ್ತಿ ಸೇರಿದಂತೆ ಅನುದಾನಿತ ಶಾಲೆಗಳ ನೌಕರರು ಹಾಗೂ ಶಿಕ್ಷಕರನ್ನು ಒಪಿಎಸ್ ಪಿಂಚಣಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗುವುದು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವಂತೆ ಶಿಕ್ಷಕರಿಗೆ ಮನವಿ ಮಾಡಿದರು.
ನಾನು ಶಿಕ್ಷಕರ ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ಬಲ್ಲವನಾಗಿದ್ದು ಅಧಿಕಾರಕ್ಕೆ ಬಂದರೆ ಈಗಾಗಲೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ೭ ನೇ ವೇತನ ಆಯೋಗದ ಜಾರಿಯು ಸೇರಿದಂತೆ ಜ್ಯೋತಿ ಸಂಜೀವಿನಿ ಯೋಜನೆಯ ವ್ಯಾಪ್ತಿಗೆ ಎಲ್ಲ ಅನುದಾನಿತ ಶಿಕ್ಷಕ ಹಾಗೂ ಉಪನ್ಯಾಸಕರನ್ನು ಸೇರ್ಪಡೆ ಮಾಡಲಾಗುವುದು. ಸರ್ಕಾರಿ ಶಾಲೆಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಭದ್ರತೆಗಾಗಿ ಸಿಸಿ ಕ್ಯಾಮರಾ ಆಳವಡಿಕೆಗೆ ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳ ಪರವಾಗಿದ್ದು, ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದರು.
ಬಿಜೆಪಿ ಅಭ್ಯರ್ಥಿಯು ಅವರ ಸರ್ಕಾರವಿದ್ದರೂ ಸಹ ೧೮ ವರ್ಷ ಅಧಿಕಾರ ಸೇರಿದಂತೆ ಮುಖ್ಯ ಸಚೇತಕರಾಗಿದ್ದವರು ಅವರ ಅವಧಿಯಲ್ಲಿ ಬಹಳಷ್ಟು ಶಾಲೆಗಳ ಮೇಲ್ಚಾವಣಿಗಳು ಇಂದಿಗೂ ಶಿಥಿಲಾವಾಗಿದ್ದರೂ ಅವುಗಳ ದುರಸ್ತಿಗೆ ಮುಂದಾಗಿಲ್ಲ. ಶಿಕ್ಷಕರ ವಿರುದ್ದವಾಗಿ ಎಲ್ಲೆಲ್ಲಿ ದೌರ್ಜನ್ಯವೆಸಗಿದ್ದಾರೆ, ಪೋನಿನ ಮೂಲಕ ಯಾರು ಯಾರಿಗೆ ತಾಕೀತು ಮಾಡಿದ್ದಾರೆ ಎಂಬುದು ತಿಳಿದಿದೆ. ಮುಂದಿನ ದಿನಗಳಲ್ಲಿ ಆ ಶಿಕ್ಷಕರುಗಳೆ ಈ ಅಭ್ಯರ್ಥಿಗೆ ಬುದ್ದಿ ಕಲಿಸಲಿದ್ದಾರೆ ಎಂದು ಪರೋಕ್ಷವಾಗಿ ವೈ.ಎ. ನಾರಾಯಣ ಸ್ವಾಮಿ ಯವರ ಕಾರ್ಯ ವೈಖರಿಗಳ ಬಗ್ಗೆ ಕುಟುಕಿದರು.
ಈ ಸಂದರ್ಭದಲ್ಲಿ ಮುತ್ತೇಗೌಡ, ಎಂ.ಆರ್. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.