ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಮೇ ೩೦ ರಂದು ಸಚಿವ ಪರಮೇಶ್ವರ್ ನಿವಾಸದ ಮುಂದೆ ಪ್ರತಿಭಟನೆ
ತುಮಕೂರು, ಮೇ ೨೫- ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದ್ದು, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ್ ಅವರ ಹೆಗ್ಗೆರೆಯ ನಿವಾಸದ ಮುಂದೆ ಮೇ ೩೦ ರಂದು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ.
ನಗರದ ಶ್ರೀ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಹೋರಾಟದ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟದ ಮುಂದಿನ ಹೆಜ್ಜೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ನಮ್ಮ ನೀರು, ನಮ್ಮ ಹಕ್ಕು ಹೋರಾಟದ ಭಾಗವಾಗಿ ಮೇ ೩೦ ರಂದು ಬೆಳಿಗ್ಗೆ ೧೦ಕ್ಕೆ ಸಚಿವ ಪರಮೇಶ್ವರ್ ನಿವಾಸದ ಮುಂದೆ ಜಿಲ್ಲೆಯ ಜನಪ್ರತಿನಿಧಿಗಳು, ನಾಗರಿಕರು ಹಾಗೂ ರೈತರನ್ನು ಒಳಗೊಂಡು ಬೃಹತ್ ಪ್ರತಿಭಟನಾ ಸಭೆ ನಡೆಸಿ , ಮನವಿ ಪತ್ರ ನೀಡಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ. ಸುರೇಶ್‌ಗೌಡ, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕ ಎಚ್.ನಿಂಗಪ್ಪ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಬಿ.ಎಚ್.ಅನಿಲ್‌ಕುಮಾರ್, ಪಂಚಾಕ್ಷರಯ್ಯ, ಎಂ.ಪಿ. ಪ್ರಸನ್ನಕುಮಾರ್, ಕೆ.ಪಿ. ಮಹೇಶ್, ಪುರವರ ಮೂರ್ತಿ, ಬಸವಕುಮಾರ್, ಆಟೋ ನವೀನ್, ರೈತ ಸಂಘದ ಜಿಲ್ಲಾಧ್ಯಕ್ಷ ಆರಾಧ್ಯ, ಸಿರಾ ಅಧ್ಯಕ್ಷ ದ್ಯಾಮೇಗೌಡ, ತುರುವೇಕೆರೆಯ ನಾಗೇಂದ್ರ, ಗಂಗಾಧರಯ್ಯ, ಕೆ.ಬಿ. ಉಮೇಶ್, ಸಂಧ್ಯಾ ಭಾಗಿಯಾಗಿದ್ದರು.