ಮನೆಯೊಳಗೆ ಬಂದ ಕೆರೆಯ ಹಾವು ಸ್ನೇಕ್ ರವಿಯಿಂದ ಆತಂಕ ದೂರ
ಕೋಲಾರ,ಮೇ,೨೫:ನಗರದ ಜಯನಗರದ ೪ನೇ ಕ್ರಾಸ್‌ನ ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀರಾಮಪ್ಪ ಅವರ ನಿವಾಸಕ್ಕೆ ಬಂದ ಬೃಹತ್ ಗಾತ್ರದ ಕೆರೆ ಹಾವನ್ನು ನಗರದ ಮುನೇಶ್ವರ ನಗರದ ಸ್ನೇಕ್ ರವಿ ಹಿಡಿದು ಈ ಭಾಗದ ನಿವಾಸಿಗಳ ಆತಂಕ ದೂರ ಮಾಡಿದರು.
ಪಕ್ಕದ ಮನೆಯ ಮಹಡಿಯಿಂದ ಜಿಗಿದು ಮನೆಯ ಹೊರ ಆವರಣಕ್ಕೆ ಬಂದ ಬೃಹತ್ ಗಾತ್ರದ ಕೆರೆ ಹಾವನ್ನು ಕಂಡ ಪಕ್ಕದ ಮನೆಯವರು ವಿಷಯ ತಿಳಿಸುತ್ತಿದ್ದಂತೆ ಮನೆಯವರಲ್ಲಿ ಆತಂಕಕ್ಕೆ ಕಾರಣವಾಯಿತು.
ಜನ ಸೇರುತ್ತಿದ್ದಂತೆ ಹಾವು ಅಲ್ಲೇ ಪಕ್ಕದಲ್ಲಿದ್ದ ನೀರೆತ್ತುವ ಪಂಪ್‌ಗೆ ಸುತ್ತಿಕೊಂಡು ಅಲ್ಲೇ ಮೊಕ್ಕಾಂ ಹೂಡಿತು. ಬೃಹತ್ ಗಾತ್ರದ ಈ ಹಾವು ನಾಗರಹಾವು ಇರಬಹುದು ಎಂದು ಕೆಲವರು ಆತಂಕದಿಂದಲೇ ಸುತ್ತುವರೆದರು.
ಈ ಸಂದರ್ಭದಲ್ಲಿ ಕೂಡಲೇ ಸ್ನೇಕ್ ರವಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರವಿ ಹಾವನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಭಯ, ಆಕ್ರೋಷದಿಂದ ಹಾವು ರವಿಯತ್ತಲೇ ಧಾವಿಸಿತು.
ಈಗಾಗಲೇ ಸುಮಾರು ೧೧ ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ದಾಖಲೆ ಮಾಡಿರುವ ಸ್ನೇಕ್ ರವಿ ಎಂದೇ ಖ್ಯಾತರಾದ ರವಿ ಎರಡೇ ನಿಮಿಷದಲ್ಲಿ ಅದನ್ನು ಹಿಡಿದು ನೀರಿನಲ್ಲಿ ಆರೈಕೆ ಮಾಡಿ ಚೀಲಕ್ಕೆ ತುಂಬಿದರು.
ಇದಾದ ನಂತರ ದೂರದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲು ಹೊರಟರು. ಈ ಸಂದರ್ಭದಲ್ಲಿ ಮಾತನಾಡಿದ ರವಿ, ಹಾವುಗಳಿಗೂ ಬದುಕಲು ಹಕ್ಕಿದೆ, ಅದರಿಂದ ರೈತರಿಗೆ ನೆರವಾಗುತ್ತಿದೆ, ಇಲಿಗಳನ್ನು ಬಿಲದೊಳಗೆ ಹೋಗಿ ತಿಂದು ಬರುವ ಹಾವು ಆಹಾರಧಾನ್ಯ ಹಾಳಾಗುವುದನ್ನು ತಪ್ಪಿಸುತ್ತದೆ ಎಂದರು.
ಯಾರೇ ಆಗಲಿ ಹಾವು ಕಂಡ ಕೂಡಲೇ ನನಗೆ ದೂರವಾಣಿ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ಆಗಮಿಸಿ ಹಾವು ಹಿಡಿದು ಸುರಕ್ಷಿತವಾಗಿ ರಕ್ಷಿಸುವುದಾಗಿ ತಿಳಿಸಿದರು.
ಇದು ಕೆರೆಹಾವಾಗಿದ್ದು, ಇದು ಕಚ್ಚುತ್ತದೆಯಾದರೂ ಅಷ್ಟೊಂದು ವಿಷಕಾರಿಯಲ್ಲ ಎಂದು ತಿಳಿಸಿದರು.