ಶಿಕ್ಷಕರು ಗುಣಮಟ್ಟದ ಬೋಧನೆಗೆ ಒತ್ತು ನೀಡಿ:ಸೀತಾರಾಮು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.25: ಶಿಕ್ಷಕರು ಸಮಯಪಾಲನೆ ಹಾಗೂ ಗುಣಮಟ್ಟದ ಬೋಧನೆಗೆ ಒತ್ತು ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದರು.
ಅವರು ಪಟ್ಟಣದ ಆಶೀರ್ವಾದ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮುಖ್ಯಶಿಕ್ಷಕರು ಅನುಸರಿಸಬೇಕಾದ ಕ್ರಮಗಳ ಕುರಿತ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
2024-25 ನೇ ಸಾಲಿನಲ್ಲಿ 29 ರಂದು ಶಾಲೆ ಆರಂಭವಾಗುತ್ತಿದ್ದು ಶಿಕ್ಷಕರು ಉತ್ಸಾಹ ಹಾಗೂ ಮಾನಸಿಕ ಸಿದ್ದತೆಯಿಂದ ಶಾಲಾ ಪ್ರಾರಂಭೋತ್ಸವ ಮಾಡಬೇಕಿದೆ. ಶಿಕ್ಷಕರು ತಮ್ಮ ವೈಯಕ್ತಿಕವಾಗಿ ಶುಭ್ರವಾದ ಬಟ್ಟೆಧರಿಸಿ ಸಮಯ ಪಾಲನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿರಬೇಕು. ದಾಖಲಾತಿ ಆಂದೋಲನ ಮಾಡುವ ಮೂಲಕ ನಿಮ್ಮ ಶಾಲೆಗೆ ಹೆಚ್ಚಿನ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಶಾಲೆಗೆ ಬರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ.ಶಾಲಾ ಹಂತದಲ್ಲಿಯೇ ಪರೀಕ್ಷೆಗಳನ್ನು ಮಾನದಂಡಗಳನ್ನು ಅನುಸರಿಸಿ ಮಾಡಿದರೆ ಮುಂದಿನ ದಿನಗಳಲ್ಲಿ ಫಲಿತಾಂಶ ಗುಣಮಟ್ಟದಿಂದ ಕೂಡಿರುತ್ತದೆ. ಪರೀಕ್ಷೆಗಳಲ್ಲಿ ಅನ್ಯ ಮಾರ್ಗಗಳನ್ನು ಅನುಸರಿಸಬೇಡಿ. ಶಾಲೆಗಳಲ್ಲಿ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.ಕಾಲಕಾಲಕ್ಕೆ ತಪಾಸಣೆ ಮಾಡಿಸಿ ವರದಿ ಇಡಬೇಕು. ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಶಾಲಾ ಆರಂಭದ ದಿನದಲ್ಲಿ ನೀಡಿ ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆ ಆರಂಭಿಸಿ.ಪ್ರತಿ ಮಕ್ಕಳಿಗೆ ವೈಯುಕ್ತಿಕ ಗಮನ ನೀಡಿ ಅಕ್ಷರ ಜ್ಞಾನ ನೀಡಲು ಕ್ರಮವಹಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬಿಸಿಯೂಟ ನಿರ್ವಹಿಸಬೇಕು. ಕಾಲಕಾಲಕ್ಕೆ ತಕ್ಕಂತೆ ಪ್ರತೀ ತಿಂಗಳು ಅನುಸರಿಸಬೇಕಾದ ಪಾಠಬೋಧನೆಯನ್ನು ನಿಖರವಾಗಿ ನಿರ್ವಹಿಸಿ. ಇಂಗ್ಲೀಷ್ ಭಾಷಾ ಬೋಧನೆ, ಗಣಿತ ಮುಂತಾದ ವಿಷಯಗಳ ಕಡೆ ಹೆಚ್ಚಿನ ಗಮನ ಹರಿಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳ ಮಾನಸಿಕ ಮಟ್ಟವನ್ನು ಅರಿತು ಮಕ್ಕಳೊಂದಿಗೆ ಮಕ್ಕಳಾಗಿ ಅವರ ಮಟ್ಟಕ್ಕೆ ಇಳಿದು ಬೋಧನೆ ಮಾಡಬೇಕು. ಶಿಕ್ಷಕರು ಕಡ್ಡಾಯವಾಗಿ ಸಮಯಪಾಲನೆ ಮಾಡಬೇಕು. ಶಾಲಾ ಅವಧಿಯಲ್ಲಿ ಅನಾವಶ್ಯಕವಾಗಿ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ. ಕರ್ತವ್ಯ ನಿರ್ವಹಿಸುವ ಗ್ರಾಮಗಳಲ್ಲಿ ಶಿಕ್ಷಕರು ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಶಿಕ್ಷಕರಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು.