ಕಾಂಗ್ರೆಸ್ ಪಕ್ಷದಿಂದ ಡಾ.ಬಿ.ಜೆ.ವಿಜಯಕುಮಾರ್ ಅವರಿಗೆ ಟಿಕೆಟ್
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.25:-ರಾಜ್ಯ ವಿಧಾನ ಪರಿಷತ್ ಗೆ ಜೂನ್ ತಿಂಗಳಿನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಡಾ.ಬಿ.ಜೆ.ವಿಜಯಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಮೃಗಾಲಯ ಪ್ರಾಧಿಕಾರದ ಮಾಜಿ ಸದಸ್ಯ ಬಿ.ಎನ್.ಕರಿಗೌಡ ಮನವಿ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಡಾ.ಬಿ.ಜೆ.ವಿಜಯಕುಮಾರ್ ಮೈಸೂರು ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಅವರ ಕ್ರಿಯಾಶೀಲ ಚಟುವಟಿಕೆಯಿಂದ ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾಗಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ ಎಂದರು. ಅವರ ತಂದೆ ತಾಲೂಕಿನ ಭೂತನಹಳ್ಳಿ ಗ್ರಾಮದ ಜವರಪ್ಪನವರು ಕಳೆದ 50 ವರ್ಷಗಳಿಗೂ ಹೆಚ್ಚಿನ ಸಮಯದಿಂದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ಪಕ್ಷದ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರವಾದದ್ದಾಗಿದೆ ಎಂದರು. ತಾಲೂಕಿನ ನೂರಾರು ಕಾಂಗ್ರೆಸ್ ಮುಖಂಡರು ಜವರಪ್ಪನವರ ಸಹಕಾರದಿಂದಲೇ ಮುನ್ನೆಲೆಗೆ ಬಂದಿದ್ದಾರೆ, ಡಾ.ಬಿ.ಜೆ.ವಿಜಯಕುಮಾರ್ ರವರ ಸಹೋದರ ಬಿ.ಜೆ.ಬಸವರಾಜ್ ಕಳೆದ 20 ವರ್ಷಗಳಿಂದ ತಾಲೂಕು ಕಾಂಗ್ರೆಸ್ ಘಟಕದ ಖಜಾಂಚಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಾ.ಬಿ.ಜೆ.ವಿಜಯಕುಮಾರ್ ರವರ ಹೆಸರು ಮುಂಚೂಣಿಯಲ್ಲಿ ಇತ್ತಾದರೂ ಹೈಕಮಾಂಡ್ ನಿರ್ದೇಶನ ಮತ್ತು ಸೂಚನೆಯಂತೆ ಎಂ.ಲಕ್ಷ್ಮಣ್ ಅಭ್ಯರ್ಥಿಯಾಗಿದ್ದಾರೆ ಅವರ ಗೆಲುವಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದೇವೆ ಎಂದರು. ಡಾ. ಬಿಜೆವಿ ಗೆ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ನೀಡುವಂತೆ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಈಗಾಗಲೇ ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ, ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದು ಅವರಿಂದ ಸಕಾರಾತ್ಮಕವಾದ ಭರವಸೆ ಬಂದಿದೆ ಎಂದು ತಿಳಿಸಿದರು. ಮೇ.27 ರಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ಮಾತನಾಡಿ ತಾಲೂಕಿನ ಭೂತನಹಳ್ಳಿ ಗ್ರಾಮದ ಡಾ.ಬಿ.ಜೆ.ವಿಜಯಕುಮಾರ್ ಮೈಸೂರು ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಯಾವುದೇ ಕಳಂಕವಿಲ್ಲದೆ ಪ್ರಾಮಾಣಿಕತೆಯಿಂದ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದರು. ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಒಟ್ಟು 11 ಕ್ಷೇತ್ರಗಳಲ್ಲಿ 8 ರಲ್ಲಿ ಜಯ ಸಾಧಿಸುವ ಮೂಲಕ ಶೇ.62 ರಷ್ಟು ಮತವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪಡೆದಿದ್ದಾರೆ ಎಂದರು. ವಿದ್ಯಾವಂತ ಯುವಕ ಡಾ.ಬಿ.ಜೆ.ವಿಜಯಕುಮಾರ್ ರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ನೀಡುವ ಮೂಲಕ ತಾಲೂಕು ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಹೆಚ್ಚಿನ ಶಕ್ತಿ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಮುಖಂಡರಾದ ಕಾನೂರು ಗೋವಿಂದೇಗೌಡ, ಅನಿಲ್ ಕುಮಾರ್, ಪಿ.ಮಹದೇವ್, ಹೊಲದಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಗೌಡ ಮುಖಂಡರಾದ ಬಿ.ಜೆ.ಬಸವರಾಜ್, ಆರ್.ಎಸ್.ಮಹದೇವ್, ಡಿ.ಎ.ಜವರಪ್ಪ, ರಾಜಶೇಖರ್, ಪಿ.ಪಿ.ಮಹದೇವ್, ಶೇಖರ್, ಪುಟ್ಟಯ್ಯ, ರಾಮಚಂದ್ರ, ಎಚ್.ಟಿ.ಪರಮೇಶ್, ನಾಗಣ್ಣ, ಹೆಚ್.ಕೆ.ಮಂಜುನಾಥ್, ಪಿ.ಎಸ್.ವಿಷಕಂಠಯ್ಯ, ಪುಟ್ಟರಾಜು, ಶಿವಣ್ಣ, ರಾಜಯ್ಯ, ಮಹದೇವ್, ದೇವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.