ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ
ಕಲಬುರಗಿ:ಮೇ.24:ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಮ್ಸ್ ಆಸ್ಪತ್ರೆ, ಕೇಂದ್ರ ಕಾರಾಗೃಹ ಮತ್ತು ಸುಧಾರಣೆ ಸೇವೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಅವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಸ್ಕಿಜೋಫ್ರೀನಿಯಾ ಕಾಯಿಲೆಗೆ ತಜ್ಞ ವೈದ್ಯರೆ ಸೂಕ್ತ ಮಾಹಿತಿ ಮತ್ತು ಚಿಕಿತ್ಸೆಯನ್ನು ನೀಡುವರು. 2017ರಲ್ಲಿ ಮಾನಸಿಕ ಹೆಲ್ತ್ ಕೇರ್ ಆಕ್ಟ್ ಜಾರಿಗೆ ತರಲಾಗಿದ್ದು, ಇದರ ಅಡಿಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಅವರಿಗೆ ಹೊಡೆಯುವುದು, ಬಡೆಯುವುದು ಹಾಗೂ ಕಬ್ಬಿಣ ಸಲಾಕೆಯಿಂದ ಬಂದಿಸುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ|| ರಾಜಕುಮಾರ್ ಎ. ಕುಲಕರ್ಣಿ, ಮಾತನಾಡಿ, ಸ್ಕಿಜೋಫ್ರೀನಿಯಾ ಕಾಯಿಲೆಯು ಸಾಮಾನ್ಯವಾಗಿ 15 ರಿಂದ 25 ವರ್ಷದೊಳಗಿನ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರಿವು ಮತ್ತು ಚಿಕಿತ್ಸೆಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಲಬುರಗಿ ಜಿಮ್ಸ್ ಆಸ್ಪತ್ರೆ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರು ಹಾಗೂ ಮನೋವೈದ್ಯರಾದ ಡಾ|| ಪ್ರಭುಕಿರಣ್ ವಿ. ಗೋಗಿ ಅವರು ಮಾತನಾಡಿ, ವಿಚಾರದಲ್ಲಿ ಬದಲಾವಣೆ, ಯಾರೋ ಮಾತನಾಡುವಂತೆ ಧ್ವನಿ ಕೇಳಿಸುವುದು, ತಾನಾಗಿ ತಾನು ಮಾತನಾಡುವುದು, ನಗುವುದು, ಅನುಮಾನ, ಕೋಪ ಮಾಡಿಕೊಳ್ಳುವುದು, ಆಸಕ್ತಿ ರಹಿತರಾಗುವುದು ತನಗೆ ಕಾಯಿಲೆ ಇಲ್ಲ ಅನ್ನೀಸೊವುದು ಸ್ಕಿಜೋಫ್ರೀನಿಯಾ ಕಾಯಿಲೆಯ ಲಕ್ಷಣಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಾತನಾಡಿದ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ|| ಪಿ.ರಂಗನಾಥ್ ಅವರು, ಸಾಮಾನ್ಯವಾಗಿ ಎಲ್ಲರಲ್ಲೂ ಮಾನಸಿಕ ಲಕ್ಷಣಗಳು ಕಾಣಲಿದ್ದು, ಇವುಗಳ ಪ್ರಮಾಣ ಹೆಚ್ಚು ಮತ್ತು ಕಡಿಮೆ ಇರುತ್ತವೆ. ಯಾರು ಹೆಚ್ಚಾಗಿ ಒತ್ತಡಕ್ಕೆ ಒಳಗಾಗಿ ಈ ಕಾಯಿಲೆ ತುತ್ತಾಗುತ್ತಾರೆ ಎಂದರು.
ಅಧೀಕ್ಷಕರಾದ ಬಿ.ಎಂ. ಕೊಟ್ರೇಶ್, ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳಾದ ಡಾ|| ಅರ್ಚನಾ, ಡಾ|| ಆನಂದ ಅಡಗಿ, ಸಹಾಯಕ ಅಧೀಕ್ಷಕರಾದ ಹುಸೇನಿ ಪೀರ್, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಕಾರಾಗೃಹ ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗಗಳು ಸೇರಿದಂತೆ ಕಲಬುರಗಿ ಕೇಂದ್ರ ಕಾರಾಗೃಹದ ಬಂದಿಗಳು ಉಪಸ್ಥಿತರಿದ್ದರು.
ಶಿಕ್ಷಕ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ನಾಗರಾಜ ಬಿರಾದಾರ ಸ್ವಾಗತಿಸಿದರು. ಶಿಕ್ಷಾ ಬಂದಿಯಾದ ರಾಮಣ್ಣ ತಂದೆ ನರಸಪ್ಪ ಪ್ರಾರ್ಥನಾ ಗೀತೆ ಹಾಡಿದರು.