ಅಂಬಲಗಾ: ಧಮ್ಮ ದೀಪ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆ ಆಚರಣೆ
ಕಲಬುರಗಿ,ಮೇ.24-ಜಿಲ್ಲೆಯ ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮದ ಧಮ್ಮದೀಪ ಬುದ್ಧ ವಿಹಾರದಲ್ಲಿ ವೈಶಾಖ ಮಾಸದ 2568ನೇ ಬುದ್ಧ ಪೂರ್ಣಿಮೆಯನ್ನು ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಸಡಗರ ಸಂಭ್ರಮದಿಂದ ತಮಿಳುನಾಡಿನ ಮಧುರೈ ಬುದ್ಧ ವಿಹಾರದ ಬಂತೆ ಸಮನ ಅರಿಯಾ ರವರ ನೇತೃತ್ವದಲ್ಲಿ ಆಚರಿಸಲಾಯಿತು.
ಬೆಳಿಗ್ಗೆಯಿಂದ ಗ್ರಾಮದ ಉಪಾಸಕಿಯರು ಬುದ್ಧ ವಿಹಾರ ಸ್ವಚ್ಚಗೊಳಿಸಿ, ರಂಗೋಲಿ ಹಾಕಿ, ವಿವಿಧ ಹೂಗಳಿಂದ ಬುದ್ಧ ವಿಹಾರವನ್ನು ಶೃಂಗರಿಸಿದ್ದರು.
ಬೆಳಿಗ್ಗೆ ಸಮನ ಅರಿಯಾ ಬಂತೆಜೀಯವರು ವಿಶೇಷ ಪೂಜೆಯನ್ನು ಬೌದ್ಧರ ಪವಿತ್ರ ಪಾಲಿ ಗಾಥೆಗಳ ಪಠಣದ ಮೂಲಕ ನೆರವೇರಿಸಿದರು. ಈ ವಿಶೇಷ ಪೂಜೆಯಲ್ಲಿ ಪ್ರತಿಯೊಬ್ಬ ಉಪಾಸಕ ಉಪಾಸಕಿಯರು ಅಗರಬತ್ತಿ ಹಚ್ಚಿ, ಹೂ ಅರ್ಪಿಸಿ ಶೃದ್ದೆ ಭಕ್ತಿಯಿಂದ ಭಾಗವಹಿಸಿದ್ದರು.
ವಿಶೇಷ ಪೂಜೆಯ ನಂತರ ಧಮ್ಮ ಪ್ರವಚನ ನೀಡಿದ ಬಂತೇಜಿಯವರು “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು ಭಗವಾನ್ ಗೌತಮ ಬುದ್ಧರ ಪಂಚಶೀಲಗಳು ನಮ್ಮನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಶಕ್ತಿ ಹೊಂದಿವೆ. ಅದಕ್ಕಾಗಿ ಜಗತ್ತಿನ ಜನರು ಧರ್ಮಾತೀತರಾಗಿ ಭಗವಾನ್ ಗೌತಮ ಬುದ್ಧರ ಪಂಚಶೀಲ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿ, ಬುದ್ದನ ಪಂಚಶೀಲ ತತ್ವಗಳನ್ನು ವಿವರಿಸಿದರು ಮತ್ತು ಉಪಸ್ಥಿತ ಜನರಿಗೆ ತ್ರೀ ಶರಣ ಮತ್ತು ಪಂಚಶೀಲ ಭೊಧಿಸಿದರು. ಬುದ್ಧ, ಧಮ್ಮ ಸಂಘವೆಂಬ ತ್ರಿರತ್ನಗಳ ಬಗ್ಗೆ ವಿವರಣೆ ನೀಡಿ, ನಾವು ಸದಾ ಈ ತ್ರಿರತ್ನಗಳಿಗೆ ಶರಣಾಗಿ ನಮ್ಮ ಜೀವನದಲ್ಲಿ ಉನ್ನತಿ ಸಾಧಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೌದ್ಧ ಸಾಹಿತಿ ಬುದ್ಧಘೋಷ್ ದೇವೇಂದ್ರ ಹೆಗ್ಗಡೆಯವರು ಮಾತನಾಡಿ , ಶೋಷಿತ ವರ್ಗಗಳ ವಿಮೋಚಕರಾದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶತ ಶತಮಾನಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಗುಲಾಮಗಿರಿಯಲ್ಲಿ ಬಳಲಿದ ದಲಿತ ಸಮುದಾಯ ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆ ಹೊಂದಲು ಬೌದ್ಧ ಧರ್ಮ ಸ್ವೀಕಾರ ಮಾಡಬೇಕೆಂದು ಹೇಳಿ, ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ನಾಗಪೂರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಕರೆ ನೀಡಿದರು. ಆದರೆ ಬಾಬಾಸಾಹೇಬ ಅಂಬೇಡ್ಕರ್ ರವರ ಪ್ರಬುದ್ಧ ಭಾರತ ನಿರ್ಮಾಣದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಅದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಬುದ್ಧ ವಿಹಾರ ನಿರ್ಮಾಣವಾಗಿ ಬೌದ್ಧ ಸಂಸ್ಕøತಿಯ ಪ್ರಸಾರ ಮಾಡಲು ಯುವಕರು ಸಿದ್ಧರಾಗಬೇಕೆಂದು ತಿಳಿಸಿದರು. ಪ್ರತಿ ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ರವರ ಬುದ್ಧ ಮತ್ತು ಆತನ ಧಮ್ಮ, ಧಮ್ಮ ಪದ, ಬುದ್ಧ ವಂದನಾ, ಮತ್ತು ಅಂಬೇಡ್ಕರ್ ವಾಣಿ ಪುಸ್ತಕಗಳನ್ನು ಕಡ್ಡಾಯವಾಗಿ ಇಡಬೇಕು. ಪ್ರತಿ ವಾರ ಬುದ್ಧ ವಿಹಾರದಲ್ಲಿ ಪೂಜೆ ಸಲ್ಲಿಸಿ ಈ ಪುಸ್ತಕ ಓದುವ ಪರಿಪಾಠ ಮುಂದುವರೆಸಬೇಕು ಎಂದು ಹೇಳಿ ಈ ಪುಸ್ತಕಗಳ ಒಂದೊಂದು ಪ್ರತಿಯನ್ನು ವಿಹಾರಕ್ಕೆ ನೀಡಿದರು.
ಈ ವಿಶೇಷ ಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕಾರ್ಯಪಾಲಕ ಅಭಿಯಂತರರು ಮತ್ತು ಧಮ್ಮ ದೀಪ ಬುದ್ಧ ವಿಹಾರದ ಮಹಾಪೆÇೀಷಕರಾದ ಅಶೋಕ ಅಂಬಲಗಿಯವರು ಮಾತನಾಡಿ, ಗ್ರಾಮದ ಎಲ್ಲಾ ವಿಧ್ಯಾರ್ಥಿಗಳು ಮತ್ತು ಯುವಕರು ಬೌದ್ಧ ಧರ್ಮದ ಅಧ್ಯಯನ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವಿಶೇಷ ಪೂಜಾ ಸಮಾರಂಭದಲ್ಲಿ ಡಾ.ಮಂಜೀತ್, ಧಮ್ಮ ದೀಪ ಬುದ್ಧ ವಿಹಾರದ ಅಧ್ಯಕ್ಷ ನೀಲಕಂಠ ಸಿಂಗೆ, ಗ್ರಾಮದ ಹಿರಿಯರು ಹಾಗೂ ನೂರಾರು ಜನ ಬೌದ್ಧ ಉಪಾಸಕ, ಉಪಾಸಕಿಯರು ಭಾಗವಹಿಸಿದ್ದರು.