ಕುಡಿದ ಮತ್ತಿನಲ್ಲಿ ನೀರಿಗೆ ಹಾರಿ ಯುವಕ ಸಾವು
ಕಲಬುರಗಿ,ಮೇ.24-ಕುಡಿದ ಅಮಲಿನಲ್ಲಿ ಯುವಕನೊಬ್ಬ ಕಮಲಾಪುರ ತಾಲ್ಲೂಕಿನ ಪಟವಾದ ಗ್ರಾಮದ ಬ್ರಿಜ್ ಕಂ ಬ್ಯಾರೇಜ್‍ಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತನನ್ನು ತೆಲಂಗಾಣ ರಾಜ್ಯದ ಜಹಿರಾಬಾದನ್ ಸಾಜೀದ್(25) ಎಂದು ಗುರುತಿಸಲಾಗಿದೆ.
ಮೃತ ಸಾಜೀದ್ ಹಾಗೂ ಆತನ ಐವರು ಸ್ನೇಹಿತರು ಮೇ.19 ರಂದು ತೆಲಂಗಾಣ ರಾಜ್ಯದ ಜಹಿರಾಬಾದ್‍ನಿಂದ ಆಟೋದಲ್ಲಿ ಚೇಂಗಟಾ ಗ್ರಾಮದ ದರ್ಗಾ ದರ್ಶನಕ್ಕೆ ಆಗಮಿಸಿದ್ದರು. ದರ್ಗಾ ದರ್ಶನ ಬಳಿಕ ಮದ್ಯ ಸೇವನೆ ಮಾಡಿದನೆನ್ನಲಾದ ಸಾಜೀದ್ ಬ್ಯಾರೇಜ್‍ಗೆ ಈಜಲು ತೆರಳಿದ್ದ. ನೀರಿನಲ್ಲಿ ಈಜಲು ಆಗದೆ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸ್ನೇಹಿತರು ಸಾಜೀದ್‍ನನ್ನು ರಕ್ಷಣೆ ಮಾಡುವ ಬದಲು ಆತನ ಆತ ನೀರಿನಲ್ಲಿ ಮುಳುಗುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯಲು ನಿರತರಾಗಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.