ಅಕ್ಕ ಅನ್ನಪೂರ್ಣ ನಿಧನಕ್ಕೆ ಹಾರಕೂಡ ಶ್ರೀ ಶೋಕ
ಬೀದರ,ಮೇ 24: ವಚನ ಸಾಹಿತ್ಯದ ಅನುಭಾವಿಗಳಾಗಿ ಮತ್ತು ಉತ್ತಮ ಪ್ರವಚನಕಾರರಾಗಿ ಬಸವ ತತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಬಾಳಿ ಬೆಳಗಿದ ಮಹಾನ್ ಅನುಭಾವಿಗಳಾದಂತಹ ಲಿಂಗೈಕ್ಯ ಅಕ್ಕ ಅನ್ನಪೂರ್ಣ ಹಂಗರಗಿ ಅವರ ನಿಧನದಿಂದ ಇಡೀ ಬಸವ ಬಳಗಕ್ಕೆ ನೋವಾಗಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ. ಚನ್ನವೀರ ಶಿವಾಚಾರ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಅವರ ಸೇವೆ ಮತ್ತು ಪರಿಶ್ರಮದಿಂದ ಕಟ್ಟಿರುವಂತಹ ಬಸವ ಸೇವಾ ಪ್ರತಿಷ್ಠಾನ ಅತ್ಯಂತ ಶ್ರದ್ಧೆಯಿಂದ ಬಾಳಿ ಬದುಕಿದ ಅವರ ಬದುಕು ಶ್ರೇಯಸ್ಕರವಾಗಿದೆ.ಇಡೀ ಕರ್ನಾಟಕದಲ್ಲಿ ಬಸವ ತತ್ವದ ಮುಖಾಂತರವಾಗಿ ಪ್ರವಚನವನ್ನು ಮಾಡಿದಂತಹ ಕೀರ್ತಿ ಅಕ್ಕ ಅನ್ನಪೂರ್ಣ ಹಂಗರಗಿ ಅವರಿಗೆ ಸಲ್ಲುತ್ತದೆ.ಅವರು ಭೌತಿಕವಾದಂತಹ ದೇಹದಿಂದ ಅಗಲಿದ್ದರೂ ಕೂಡ ಅವರ ದಿವ್ಯ ಆತ್ಮ ಬಸವ ಭಕ್ತರ ಮನದಲ್ಲಿ ಮಹಾ ಜ್ಯೋತಿಯಾಗಿ ಸದಾ ಕಾಲ ಬೆಳಗುತ್ತದೆ ಎಂದು ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.