6 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಖಚಿತ: ಗುರಿಕಾರ
ಬೀದರ್:ಮೇ.24: ಪದವಿಧರ ಕ್ಷೇತ್ರ ಮೂರು ಹಾಗೂ ಶಿಕ್ಷಕರ ಕ್ಷೇತ್ರ ಮೂರು ಸೇರಿ ಒಟ್ಟು ಆರು ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಪಕ್ಕಾ ಎಂದು ಕರ್ನಾಟಕ ಪ್ರದೇಶ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಸರ್ಕಾರದ ಪಂಚ ಗ್ಯಾರಂಟಿಗಳ ಫಲಶ್ರುತಿ ಹಾಗೂ 6 ತಿಂಗಳ ಮೊದಲೆ 6 ಕ್ಷೇತ್ರಗಳ ಉಮೆದುವಾರರ ಘೋಷಣೆ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಲಿದೆ ಎಂದರು.
ನಮ್ಮ ಐದು ಗ್ಯಾರಂಟಿಗಳಲ್ಲಿ ಪದವಿಧರರ ಯೋಜನೆಯಾದ ಯುವ ನಿಧಿಯು ಒಂದಾಗಿದ್ದು, ಪದವಿಧರರಿಗೆ ಆಶಾಕಿರಣವಾಗಿದೆ. ಸರ್ಕಾರಿ ಶಾಲೆಗಳಿಗೆ 11,494 ಶಿಕ್ಷಕರ ನೇಮಕ, 35 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. 2,162 ಸರಕಾರಿ ಶಾಲೆಗಳ 7,342 ಕೊಠಡಿಗಳ ದುರುಸ್ತಿಗೆ 70 ಕೋಟಿ ಅನುದಾನ ನೀಡಲಾಗಿದೆ. 58 ಲಕ್ಷ ವಿದ್ಯಾರ್ಥಿಗಳಿಗೆ 280 ಕೋಟಿ ವೆಚ್ಚದಲ್ಲಿ ಪೌಷ್ಟಿಕ ಆಹಾರ ವಿತರಣೆ ಮಾಡಲಾಗಿದೆ. ಸರಕಾರಿ ಶಾಲೆಯ 45 ಲಕ್ಷ ಮಕ್ಕಳಿಗೆ 143 ಕೋಟಿ ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಅತ್ಯುತ್ತಮ ಸಾಧನೆ ಮಾಡಿದ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷದಂತೆ ಒಟ್ಟು 350 ಕೋಟಿ ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರುಗಳಿಗೆ ಕನಿಷ್ಟ 5 ಸಾವಿರ ರೂಪಾಯಿಗಳಿಂದ ಗರಿಷ್ಟ 8 ಸಾವಿರ ರೂಪಾಯಿಗಳಿಗೆ ವೇತನ ಹೆಚ್ಚಳ ಮಾಡಲಾಗಿದೆ. ಅತಿಥಿ ಉಪನ್ಯಾಸಕರುಗಳಿಗೆ ರಜೆಯ ಸೌಲಭ್ಯ, 5 ಲಕ್ಷ ಆರೋಗ್ಯ ವಿಮೆ ಹಾಗೂ 60 ವರ್ಷ ಮುಗಿದ ಬಳಿಕ ನಿವೃತ್ತಿಯಾಗುವ ಅತಿಥಿ ಉಪನ್ಯಾಸಕರಿಗೆ ಬರಿಗೈಲಿ ಕಳುಹಿಸದೇ 5 ಲಕ್ಷ ಇಡಿ ಗಂಟು ನೀಡಲಾಗುತ್ತಿದೆ ಎಂದವರು ತಿಳಿಸಿದರು.
19 ಸಾವಿರ ಎನ್.ಪಿ.ಎಸ್ ಯೋಜನೆಯಲ್ಲಿದ್ದ ನೌಕರರನ್ನು ಒ.ಪಿ.ಎಸ್ ವ್ಯಾಪ್ತಿಗೆ ಒಳಪಡಿಸಲಾಗಿದೆ. ಶಿಕ್ಷಕರ ಕೊರತೆ ಮೆರೆಗೆ 29 ಸಾವಿರ ಶಿಕ್ಷಕರುಗಳಿಗೆ ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ತೆ ನೀಡಿದ ಕ್ಷಣಾರ್ಧದಲ್ಲಿ ರಾಜ್ಯ ಸರ್ಕರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಎನ್.ಇ.ಪಿ ಬದಲು ಎಸ್.ಇ.ಪಿ ಯೋಜನೆ ತರಲು ಸಮಿತಿ ರಚಿಸಲಾಗಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಪುರ್ಣವಾಗಿ ಉಳಿದಿರುವ ಯೋಜನೆಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವನ್ನು ಪೂರ್ತಿ ಮಾಡಿದೆ ಅಲ್ಲದೇ ಮುಂದೆಯೂ ಪದವಿಧರರ ಇತರೆ ಬೇಡಿಕೆಗಳಿಗೂ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದ್ದು, ನಮ್ಮ 6 ಜನ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ರಾಜ್ಯದ ಪದವಿಧರರು ಹಾಗೂ ಶಿಕ್ಷಕರಲ್ಲಿ ಮನವಿ ಮಾಡಿದರು.
ಕೆ.ಪಿ.ಸಿ.ಸಿ ಶಿಕ್ಷಕರ ಘಟಕದ ರಾಜ್ಯ ಸಂಚಾಲಕ ತಿಮ್ಮಯ್ಯ ಪುರ್ಲೆ, ಜಿಲ್ಲಾ ಅಧ್ಯಕ್ಷ ಜಾನ್ ವೆಸ್ಲಿ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಪಾಟೀಲ, ಪದವಿಧರ ವಿಭಾಗದ ಉಪಾಧ್ಯಕ್ಷ ಶಶಿಧರ, ಬೀದರ್ ದಕ್ಷಿಣ ಶಿಕ್ಷಕರ ಘಟಕದ ಅಧ್ಯಕ್ಷ ಪ್ರಭಾಕರ ಸೋನಿ ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.