ಉರಗ ರಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ
ಕೂಡ್ಲಿಗಿ. ಮೇ.24 :- ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಜನವಸತಿ ಪ್ರದೇಶದಿಂದ ಹಾವುಗಳನ್ನು ರಕ್ಷಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ತಿಳಿಸಿದ್ದಾರೆ.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಆನೇಕ ಜನರು ಸ್ವಯಂ ಸ್ಪೂರ್ತಿಯಿಂದ ಜನವಸತಿ ಪ್ರದೇಶದಿಂದ ಉರಗಗಳನ್ನು ಸಂರಕ್ಷಿಸಿ ಅವುಗಳನ್ನು ಕಾಡಿಗೆ ಬಿಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿರುವ ಉರಗ ರಕ್ಷಕ (ಸ್ನೇಕ್ ರೆಸ್ಕೂಆರ್)ರ ಸಮಗ್ರ ಮಾಹಿತಿ ಇರುವುದಿಲ್ಲ. ಆದ್ದರಿಂದ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಸ್ವಯಂ ಪ್ರೇರಣೆಯಿಂದ ಉರಗ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಹಿರಿಯ ಉರಗ ತಜ್ಞರು ಹಾಗೂ ವೈದ್ಯರಿಂದ ತರಬೇತಿ ನೀಡಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಈ ಅಧಿಕೃತ ಮಾನ್ಯತೆ ಪಡೆದವರು ಮಾತ್ರ ಜನವಸತಿ ಪ್ರದೇಶದಿಂದ ಹಾವುಗಳನ್ನು ಹಿಡಿದು ಬಿಡುಗಡೆ ಮಾಡಲು ಅವಕಾಶವಿರುತ್ತದೆ. ಆದ್ದರಿಂದ ಈ ಕುರಿತು ಒಂದು ದಿನದ ಕಾರ್ಯಾಗಾರವನ್ನು ಇದೇ ತಿಂಗಳ 28ನೇ ದಿನಾಂಕದಂದು ಬಳ್ಳಾರಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಉರಗ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ಉರಗ ರಕ್ಷಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಸಂದೀಪ್ ಸೂರ್ಯವಂಶಿ ಕೋರಿದ್ದಾರೆ.
ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು; ವಲಯ ಅರಣ್ಯಾಧಿಕಾರಿಗಳು, ಬಳ್ಳಾರಿ: 77605 34653 ಹಾಗೂ ಉಪವಲಯ ಅರಣ್ಯಾಧಿಕಾರಿ:98869 91202, ಅಥವಾ
dcfbellaryt@gmail.com ಗೆ ಸಂಪರ್ಕಿಸಬಹುದಾಗಿದೆ.