ಸಂವಿಧಾನ ಸಂರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟಕ್ಕೆ ಯಳಸಂಗಿ ಕರೆ
ಆಳಂದ:ಮೇ.24: ದೇಶದ ಸರ್ವ ಜನಾಂಗಕ್ಕೆ ಸಂವಿಧಾನದ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಂಸ್ಕøತಿಕವಾಗಿ ನ್ಯಾಯ ಒದಗಿಸಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ಇಂದು ಅಪಾಯದಲ್ಲಿದೆ, ಹೀಗಾಗಿ ಸರ್ವರು ಸಂವಿಧಾನ ಸಂರಕ್ಷಣೆಗೆ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಬೇಕು ಎಂದು ದಲಿತ ಸೇನೆ ರಾಜಾಧ್ಯಕ್ಷ ಹಣಮಂತ ಯಳಸಂಗಿ ಅವರು ಕರೆ ನೀಡಿದರು.
ಪಟ್ಟಣದ ಭೀಮನಗರದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ವರಿಗೆ ನ್ಯಾಯ ನೀಡುವ ಸಂವಿಧಾನ ಇಂದು ಅಪಾಯದಲ್ಲಿದೆ. ಮನುವಾದಿಗಳು ಇದರ ಬದಲಾವಣೆಗೆ ಸಂಚುರೂಪಿಸತೊಡಗಿದ್ದಾರೆ. ಎಲ್ಲರೂ ಇದರ ಉಳಿವಿಗೆ ಜಾಗೃತರಾಗಿ ಶಿಕ್ಷಣ ಸಂಘಟನೆ ಹೋರಾಟದಲ್ಲಿ ಪಾಲ್ಗೊಂಡು ಡಾ. ಬಿ.ಆರ್. ಅಂಬೇಡ್ಕರ್‍ವರ ಕನಸು ನನಸು ಮಾಡಲು ಮುಂದಾಗಬೇಕು ಎಂದು ಹೇಳಿದರು.
ಶೋಷಿತರ ಹಕ್ಕುಗಳು ಈಡೇರಿಸಿಕೊಳ್ಳಲು ಹೋರಾಟ ಅಗತ್ಯವಾಗಿದೆ. ಆಳಂದ ತಾಲೂಕು ಸೂಫಿ-ಸಂತರ ನಾಡು, ಇಲ್ಲಿನ ಕೋಮು ಸೌಹಾರ್ದತೆ ಕಾಣದ ಕೈಗಳಿಂದ ಕದಡಿಸುವ ಕೆಲಸ ನಡೆದಿದ್ದು, ಇದಕ್ಕಾಗಿ ಜಾಗೃತರಾಗಿ ಸಂಘಟಿತ ಹೋರಾಟದ ಮೂಲಕ ಸೌಹಾರ್ದತೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವಂತಾಗಬೇಕು ಎಂದು ಹೇಳಿದರು.
ಉಸ್ತುರಿ,ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ನಿರಗುಡಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಶಿಕ್ಷಕ ಜಿತೇಂದ್ರ ತಳವಾರ ಮಾತನಾಡಿ, ಡಾ. ಅಂಬೇಡ್ಕರ್ ಅವರ ಬಾಲ್ಯದಲ್ಲೇ ತಮ್ಮವರನ್ನು ಕಳೆದುಕೊಂಡು ಶೋಷಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೀಗಾಗಿ ಅಂಬೇಡ್ಕರ್ ಅವರನ್ನು ಕೇವಲ ಮೂರ್ತಿಯಲ್ಲಿ ಕಾಣದೆ ಅವರ ವಿಚಾರಧಾರೆ ಪುಸ್ತಕಗಳನ್ನು ಓದಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ನಿಕಟಪೂರ್ವ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಉದ್ಯಮಿ ಸಂತೋಷ ಗುತ್ತೇದಾರ, ವೀರಶೈವ ಸಮಾಜ ಕಾಯಾಧ್ಯಕ್ಷ ರೇವಣಸಿದ್ಧಪ್ಪಾ ನಾಗೂರೆ, ಚನ್ನು ಪಾಟೀಲ, ದಲಿತ ಸೇನೆ ತಾಲೂಕು ಅಧ್ಯಕ್ಷ ಚಂದ್ರಶಾ ಗಾಯಕವಾಡ, ಪ್ರಧಾನ ಕಾರ್ಯದರ್ಶಿ ದತ್ತಾ ಕಟ್ಟಿಮನಿ, ಗುಂಡು ಗೌಳಿ, ಜಯಂತಿ ಸಮಿತಿ ಅಧ್ಯಕ್ಷ ಕಿಟ್ಟಿ ಸಾಲೇಗಾಂವ, ಸಿದ್ಧಾರ್ಥ ಸಿಂಗೆ, ಪ್ರವೀಣ ಮೊದಲೆ, ಅಜಯ ಸಿಎಂ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಲಕ್ಷ್ಮಣ ಜಳಕಿ ಮತ್ತು ಮುಖಂಡ ಸೂರ್ಯಕಾಂತ ಸಾಲೇಗಾಂವ, ಗಂಗಾರಾಮ ಮುದಗಲೆ, ಮಲ್ಲಿಕಾರ್ಜುನ ಶ್ರೀಂಗೇರಿ ಕಿಣಗಿ, ಕಪಿಲ ಎಸ್. ವಾಲಿ, ಶ್ರೀಶೈಲ ಖಜೂರಿ, ಚಂದ್ರಶಾ ಗಾಯಕವಾಡ, ಸೋಮಶೇಖರ ಬಂಗರಗಾ, ದಯಾನಂದ ಸಾಲೇಗಾಂವ, ಜೈಭೀಮ ದೊಡ್ಡಮನಿ, ಪಪು ತೋಳೆ, ರಜನಿಶ ಜಂಗಲೆ, ರಾಜಕುಮಾರ ಮುದಗಲೆ, ಡಾ. ಅವಿನಾಶ ದೇವನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಪಾಂಡರಂಗ ಮೊದಲೆ ನಿರೂಪಿಸಿದರು. ಶ್ರೀಕಾಂತ ಕಾಂಬಳೆ ಸ್ವಾಗತಿಸಿದರು. ಚಂದ್ರು ಜಂಗಲೆ ವಂದಿಸಿದರು.
ಬಳಿಕ ಪ್ರಮುಖ ರಸ್ತೆಗಳ ಮೂಲಕ ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಮೂರ್ತಿಮೆ ಮೆರವಣಿಗೆ ಅದ್ಧೂರಿಯಾಗಿ ಕೈಗೊಳ್ಳಲಾಯಿತು.