ಪುಟ್ಟರಾಜ ಎಂದು ಹೆಸರಿಟ್ಟುಕೊಂಡು ದೊಡ್ಡ ರಾಜರಾಗಿ ಬೆಳೆದರು
ಅಫಜಲಪುರ:ಮೇ.24: ಅಂಧ, ಅನಾಥ ಮಕ್ಕಳಿಗೆ ಆಸರೆ ನೀಡುವುದಲ್ಲದೆ ಸಂಗೀತ ಕಲಿಸಿದ ಕೀರ್ತಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳಿಗೆ ಸಲ್ಲುತ್ತದೆ. ಪುಟ್ಟರಾಜ ಎಂದು ಹೆಸರಿಟ್ಟುಕೊಂಡು ದೊಡ್ಡ ರಾಜರಾಗಿ ಬೆಳೆದವರು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು. ಇಂದು ಅವರ ಗರಡಿಯಲ್ಲಿ ಪಳಗಿದವರು ಸಂಗೀತ ಲೋಕ ಆಳುತ್ತಿದ್ದಾರೆ ಎಂದು ಮಳೇಂದ್ರ ಸಂಸ್ಥಾನ ಹಿರೇಮಠದ ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಕಾಳಿಕಾ ಮಂದಿರದಲ್ಲಿ ಶ್ರೀಗುರು ಪುಟ್ಟರಾಜ ಸಂಗೀತ ಪ್ರತಿಷ್ಠಾನದ ವತಿಯಿಂದ ನಡೆದ ಗಾನಯೋಗಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 110ನೇ ಜಯಂತಿ ಹಾಗೂ ಸ್ವರಸಾಧನಾ ಸಂಗೀತ ಪಾಠ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಂಗೀತ ಲೋಕ ಅಂತ್ಯವಿಲ್ಲದ ಆಕಾಶವಿದ್ದಂತೆ. ಈ ಲೋಕದಲ್ಲಿ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರು ನಕ್ಷತ್ರಗಳಾಗಿ ಮಿನುಗಲಿ ಎಂದು ಆಶೀರ್ವಚನ ನೀಡಿದರು.
ಹರ್ಷವರ್ಧನ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ. ಸಂಗಣ್ಣ ಸಿಂಗೆ ಮಾತನಾಡುತ್ತಾ ಅಂಧ, ಅನಾಥರ ಪಾಲಿನ ಆರಾಧ್ಯ ದೈವ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು, ನಾಡು, ದೇಶ ಕಂಡ ಅಪರೂಪದ ಸಂತ ಅವರಾಗಿದ್ದಾರೆ. ಅವರ ಸೇವೆ ಅನನ್ಯವಾದದ್ದು. ಪುಟ್ಟರಾಜ ಕವಿ ಗವಾಯಿಗಳ ಹೆಸರಲ್ಲಿರುವ ಶಕ್ತಿ ಬಹಳ ಅಪಾರವಾಗಿದೆ ಎಂದ ಅವರು ಅಂಧ ಮಕ್ಕಳು, ಅನಾಥರಿಗೆಲ್ಲ ಸಂಗೀತ ಕಲಿಸುವ ಮೂಲಕ ಪುಟ್ಟರಾಜ ಕವಿಗಳು ದೇವರ ಸ್ಥಾನದಲ್ಲಿ ನಿಂತಿದ್ದಾರೆ. ಇಂದು ಅವರ ಶಿಷ್ಯ ಸಂಕುಲ ಸಂಗೀತ ಲೋಕವನ್ನು ಶ್ರೀಮಂತಗೊಳಿಸುವ ಕೆಲಸ ಮಾಡುತ್ತಿದೆ ಎಂದ ಅವರು ಸಾಮಾನ್ಯ ಶಿಕ್ಷಕರಿಗೂ ಸಂಗೀತ ಶಿಕ್ಷಕರಿಗೂ ಬಹಳಷ್ಟು ವ್ಯತ್ಯಾಸವಿದೆ. ನಾಲ್ಕು ಗೋಡೆಗಳ ನಡುವೆ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರು ಒಂದೊಮ್ಮೆ ತಾಳ್ಮೆ ಕಳೆದುಕೊಳ್ಳಬಹುದು, ಆದರೆ ಅಂಧ, ಅನಾಥ ಮಕ್ಕಳಿಗೆ ಸಂಗೀತ ಕಲಿಸುವ ಶಿಕ್ಷಕರಲ್ಲಿ ಸಾಕಷ್ಟು ತಾಳ್ಮೆ ಮತ್ತು ಸಹನೆ ಇರುವುದು ಕಾಣಬಹುದಾಗಿದೆ. ಇದಕ್ಕೆಲ್ಲ ಪುಟ್ಟರಾಜ ಕವಿ ಗವಾಯಿಗಳ ಪುಣ್ಯಾಶ್ರಮ ಕಾರಣ ಮತ್ತು ಪ್ರೇರಣೆಯಾಗಿದೆ ಎಂದರು.
ಹಿಂಚಗೇರಿಯ ಶಂಭುಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪ್ರತಿಷ್ಠಾನ ಅಧ್ಯಕ್ಷ ಮಹೇಶ ಕಾಮಶೆಟ್ಟಿ, ಸ್ವರಸಾಧನಾ ಸಂಗೀತ ಪಾಠ ಶಾಲೆ ಶಿಕ್ಷಕ ಸಂತೋಷ ಕಾಮಶೆಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ವಾಳಿ, ಧರ್ಮರಾವ ರೇವೂರ, ಪಿ.ಸಿ ತಾವರಖೇಡ, ಶ್ರೀಮಂತ ಪತ್ತಾರ, ಸೌರಭ ಮನಮಿ, ಮಲ್ಲಿಕಾರ್ಜುನ ಬೆಟ್ಟಜೇವರ್ಗಿ, ಸಿದ್ದು ಯಳಸಂಗಿ ಸೇರಿದಂತೆ ಅನೇಕರು ಇದ್ದರು. ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು.