ಸಂಗೀತ ಮನದ ಮಾಲಿನ್ಯ ದೂರ ಮಾಡುತ್ತದೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.24:- ಸಂಗೀತ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಮನದ ಮಾಲಿನ್ಯ ದೂರ ಮಾಡಿ ಮನೋ ಮಂದಿರ ಕಟ್ಟುವಲ್ಲಿ ಸಹಕಾರಿಯಾಗುತ್ತದೆ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಬಿ.ವಿ.ವಸಂತಕುಮಾರ್ ತಿಳಿಸಿದರು.
ಜಯಲಕ್ಷ್ಮಮ್ಮಣ್ಣಿ ಸ್ಮಾರಕ ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ವಾದ್ಯ ಸಂಗೀತ ಸ್ಪರ್ಧೆ ಮತ್ತು ದಿವಂಗತ ಸಣ್ಣೇಗೌಡ ಸ್ಮಾರಕ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ನಡೆಸುವ ಈ ಸ್ಪರ್ಧೆಗಳು ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿವೆ. ಭಾಷೆ ಸಂಗೀತ ಆಗಬೇಕು. ಸಂಗೀತ ಭಾಷೆ ಆಗಬೇಕು. ಈ ಎರಡೂ ಅಂಶಗಳು ನಮ್ಮ ಕಾಲೇಜಿನಲ್ಲಿ ನಡೆಸುವ ಸಂಗೀತ ಮತ್ತು ಚರ್ಚಾ ಸ್ಪರ್ಧೆಯಲ್ಲಿ ಅಡಕವಾಗಿವೆ. ಸ್ಪರ್ಧೆಗಳು ಕೇವಲ ಬಹುಮಾನ ಗೆಲ್ಲುವುದಕ್ಕಲ್ಲ. ಅವು ಬದುಕನ್ನು ಕಟ್ಟಿಕೊಳ್ಳುವ ಅವಕಾಶಗಳನ್ನು ಕಲ್ಪಿಸುತ್ತವೆ ಎಂದು ಹೇಳಿದರು.
ಶಿವರಾಮ್ ಪೇಟೆ ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕಿ ಅರ್ಷಿಯ ಪರ್ವೀನ್ ಕೌರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿ ನಂಜುಂಡಯ್ಯ.ಎಂ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿ ಅಧ್ಯಕ್ಷೆ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಮಂದಿಸಿದರು.
ಆಕಾಶವಾಣಿಯ ಹಿರಿಯ ಉದ್ಘೋಷಕ ಡಾ.ಉಮೇಶ್, ವಿದ್ವಾನ್ ರಾಕೇಶ್ ಅಯ್ಯರ್, ಮಹಾಲಿಂಗು ಮತ್ತು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಡಿಸುಂದರಿ ಸ್ಪರ್ಧೆಗಳ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕಾಲೇಜಿನ ಬೋಧಕ ಬೋಧಕೇತರ ವರ್ಗದವರು, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.