ಕರ್ತವ್ಯ ಪುಸ್ತಕಕ್ಕೆ ಸಹಿ ಮಾಡಿ ಬೀಗರೂಟದಲ್ಲಿ ಭಾಗಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.24: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರು ಕರ್ತವ್ಯಕ್ಕೆ ಹಾಜರಾಗಿದ್ದೇವೆ ಎಂಬಂತೆ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಸಾಮೂಹಿಕವಾಗಿ ಬೀಗರೂಟದಲ್ಲಿ ಪಾಲ್ಗೊಂಡು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಧ್ಯಾಪಕರು ಎಂದರೆ ಶಿಸ್ತು, ಸಂಯಮ, ಕಲಿಸುವ ಗುರುಗಳು, ಆದರೆ ಗುರುಗಳೇ ದಾರಿ ತಪ್ಪಿದರೆ ವಿದ್ಯಾರ್ಥಿ ಸಮೂಹ ಏನಾಗಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲಾತಿ ಮಾಡಿಸಲು ಬಂದ ಪೆÇೀಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ-22ರ ಬುಧವಾರದಂದು ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಸಿ.ರಮೇಶ್ ಅವರ ಮಗಳ ಮದುವೆಯ ಬೀಗರ ಔತಣ ಕೂಟಕ್ಕೆ ಕಾಲೇಜಿನ ಖಾಯಂ ಅಧ್ಯಾಪಕರುಗಳು ಸಾಮೂಹಿಕವಾಗಿ ಸಹಿ ಮಾಡಿ ಬಸ್ಸಿನಲ್ಲಿ ರಾಮನಗರ ಜಿಲ್ಲೆಯ ಬಿಡದಿಗೆ ಬೀಗರೂಟಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಅಧ್ಯಾಪಕರುಗಳು ಯಾವುದೇ ರೀತಿಯ ರಜೆ ಅಥವಾ ಮೇಲಾಧಿಕಾರಿಗಳ ಅನುಮತಿಯನ್ನು ಪಡೆಯದೇ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಕರ್ತವ್ಯದ ವೇಳೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ನೂರಾರು ಕಿ.ಮೀ. ದೂರ ತೆರಳಿರುವುದು ಖಂಡನೀಯವಾದುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧ್ಯಾಪಕರ ಸಾಮೂಹಿಕ ಗೈರುಹಾಜರಿಯ ಬಗ್ಗೆ ಕಛೇರಿಯ ವ್ಯವಸ್ಥಾಪಕರನ್ನು ಕೇಳಿದರೆ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ, ಅಧ್ಯಾಪಕರು ಸಹಿ ಮಾಡಿದ್ದಾರೋ ಇಲ್ಲವೋ ನನ್ನ ಗಮನಕ್ಕೆ ಬರುವುದಿಲ್ಲ ಕಾಲೇಜಿನ ಆಡಳಿತ ವ್ಯವಹಾರವನ್ನೆಲ್ಲಾ ಪ್ರಾಂಶುಪಾಲರೇ ನಿರ್ವಹಿಸುತ್ತಾರೆ. ಈ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲಾ. ಪ್ರಾಂಶುಪಾಲರು ಬಂದಾಗ ಅವರನ್ನೇ ಕೇಳಿ ಮಾಹಿತಿ ಪಡೆಯಿರಿ ಎಂದು ಕಾಲೇಜಿನ ವ್ಯವಸ್ಥಾಪಕಿ ಭುವನೇಶ್ವರಿ ತಿಳಿಸಿದ್ದಾರೆ.
ಅಧ್ಯಾಪಕರು ಕರ್ತವ್ಯ ಹಾಜರಿ ಪುಸ್ತಕಕ್ಕೆ ಸಾಮೂಹಿಕವಾಗಿ ಸಹಿ ಮಾಡಿ ಖಾಸಗಿ ಕಾರ್ಯಕ್ರಮಕ್ಕೆ ತೆರಳಿರುವ ಬಗ್ಗೆ ಮೈಸೂರಿನ ಪ್ರಾದೇಶಿಕ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನೀವು ನಮಗೆ ಲಿಖಿತವಾಗಿ ದೂರು ನೀಡಿದರೆ ಖಂಡಿತವಾಗಿಯೂ ಕ್ರಮವಹಿಸುತ್ತೇನೆ ಎಂದಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶಾತಿ ಮಾಡಲು ಪೆÇೀಷಕರು ತಮ್ಮ ಮಕ್ಕಳ ಜೊತೆ ಹೋಗಿ ಕಛೇರಿಯಲ್ಲಿ ಪ್ರಾಂಶುಪಾಲರನ್ನು ಭೇಟಿ ಮಾಡಲು ಕೇಳಿದರೆ ಪ್ರಾಂಶುಪಾಲರು ಅನ್ಯಕಾರ್ಯದ ನಿಮಿತ್ತ ವಿಶ್ವವಿದ್ಯಾನಿಲಯಕ್ಕೆ ತೆರಳಿದ್ದಾರೆ ಎಂದು ಸಿದ್ಧಉತ್ತರ ನೀಡುತ್ತಾರೆ. ಆದರೆ ಪ್ರಾಂಶುಪಾಲರು ಕೂಡಾ ಕಾರ್ಯಸ್ಥಾನ ಬಿಡುವಾಗ ಚಲನವಲನ ವಹಿಯಲ್ಲಿ ಸಹಿಮಾಡಿ ಅವರ ಪ್ರಭಾರವನ್ನು ಅಧೀನ ಅಧಿಕಾರಿಗಳಿಗೆ ವಹಿಸದೇ ಕೇವಲ ಮೌಖಿಕವಾಗಿ ತಿಳಿಸಿ ಹೋಗಿರುವುದು ಇವರ ಕಾರ್ಯದಕ್ಷತೆಯನ್ನು ತೋರಿಸುತ್ತಿದೆ ಎಂದು ಪೆÇೀಷಕರು ಆರೋಪಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಕೆ.ಆರ್.ಪೇಟೆ ಕಾಲೇಜು ಶಿಕ್ಷಣಕಾಶಿ ಎಂದು ಹೆಸರು ಮಾಡಿದೆ ಈ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕಾಲೇಜಿಗೆ ಮತ್ತು ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಅದ್ಯಾಪಕರುಗಳು ಇತ್ತೀಚೆಗೆ ಸರಿಯಾದ ಸಮಯಕ್ಕೆ ಬರದೇ ಬೇಕಾ ಬಿಟ್ಟಿಯಾಗಿ ಕಾಲೇಜಿಗೆ ಬರುವುದು ಮಧ್ಯಾಹ್ನಕ್ಕೆ ಹೊರಹೋಗುವುದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ ಆಗಿದೆ. ಇದೆಲ್ಲವೂ ಕೂಡಾ ಕಾಲೇಜಿನ ಮತ್ತು ಅಕ್ಕ ಪಕ್ಕದ ರಸ್ತೆಯಲ್ಲಿ ಇರುವ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಇದನ್ನು ಪ್ರಾಂಶುಪಾಲರು ಕಂಡರೂ ಕಾಣದಂತಿರುವುದು ಪ್ರಾಂಶುಪಾಲರ ಅದಕ್ಷತೆಯನ್ನು ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮುರುಗೇಶ್ ಲಕ್ಷಾಂತರ ರೂಪಾಯಿ ವೇತನ ಪಡೆಯುವ ಅದ್ಯಾಪಕರುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕಾಲೇಜಿನಲ್ಲಿದ್ದ ಕೆಲವು ಪದವಿ ಕೋಸ್ರ್ಗಳು ಕೂಡಾ ಅಧ್ಯಾಪಕರ ಬೇಜವಾಬ್ದಾರಿತನದಿಂದ ಮುಚ್ಚಿಹೋಗುವ ಹಂತ ಬಂದಿದೆ ಎಂದು ಆರೋಪಿಸಿದ್ದಾರೆ.
ಖಾಯಂ ಅಧ್ಯಾಪಕರುಗಳು ಈ ರೀತಿ ಸಾಮೂಹಿಕವಾಗಿ ಸಹಿ ಮಾಡಿ ಹೋಗುತ್ತಿರುವುದು ಇದೇ ಮೊದಲಲ್ಲ, ಕಾಲೇಜಿನಲ್ಲಿ ಖಾಯಂ ಆಗಿ ಪ್ರಾಂಶುಪಾಲರು ಇಲ್ಲದಿರುವುದರಿಂದ ತಮಗಿಷ್ಠ ಬಂದಂತೆ ಆಡುತ್ತಿರುವ ಅಧ್ಯಾಪಕರು ನಿರಂತರವಾಗಿ ಸಹಿ ಮಾಡಿ ಮಧ್ಯಾಹ್ನಕ್ಕೆ ತೆರಳುತ್ತಾರೆ. ಈ ಬಗ್ಗೆ ಯಾರೂ ಕೇಳುವುದಿಲ್ಲ. ಕೇಳಿದರೆ ನಾನು ಸ್ಥಳೀಯ ಏನು ಬೇಕಾದರೂ ಮಾಡಿಕೊಳ್ಳುತ್ತೇವೆ. ನಾನು ಲೋಕಲ್ ನಮಗೆ ಎಲ್ಲಾ ಗೊತ್ತಿದ್ದಾರೆ. ನೀವು ಏನು ಮಾಡೊಕ್ಕಾಗಲ್ಲಾ ಎಂದು ಬೆದರಿಕೆಯನ್ನು ಕೆಲವು ಅಧ್ಯಾಪಕರು ಹಾಕುತ್ತಾರೆ ಎಂದು ಹೆಸರು ಹೇಳದ ಅತಿಥಿ ಉಪನ್ಯಾಸಕರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.