ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ಗಜಗಣತಿ ಆರಂಭ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.24- ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಇಂದಿನಿಂದ ಮೂರು ದಿನಗಳ ಗಜಗಣತಿ ಆರಂಭಿಸಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯ ಜೀವಿಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದರು.
ಇಂದು ಆರಂಭವಾಗಿರುವ ಆನೆ ಗಣತಿಕಾರ್ಯ ಮೇ 25 ರವರೆಗೆ ನಡೆಯಲಿದೆ. ಮೊದಲ ದಿನವಾದ ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್‍ಗಳು, ಕಾವೇರಿ ವನ್ಯ ಜೀವಿಧಾಮದ 43 ಗಸ್ತುಗಳ 72 ಬ್ಲಾಕ್‍ಗಳಲ್ಲಿ 162 ಸಿಬ್ಬಂದಿ ಮತ್ತು ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 170 ಸಿಬ್ಬಂದಿ ಆನೆಗಣತಿ ಕೈಗೊಂಡರು.
ಗಜಗಣತಿಯು ಮೂರು ದಿನಗಳ ಕಾಲ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಗುರುವಾರ 15 ಕಿಮೀ ನಡೆದು ಆನೆ ಗುಂಪುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಲೆಕ್ಕ ಹಾಕಿದ್ದಾರೆ. ಆನೆ ಗುಂಪಿನಲ್ಲಿ ಎಷ್ಟು ಹೆಣ್ಣಾನೆಗಳಿವೆ?, ಎಷ್ಟು ಮರಿಗಳಿವೆ?, ಗುಂಪಿನಲ್ಲಿ ಎಷ್ಟು ಆನೆಗಳಿವೆ? ಎಂಬುದನ್ನು ಗುರುತು ಮಾಡಲಾಗಿದೆ. ಪ್ರತಿ ಬೀಟ್‍ನಲ್ಲೂ ಮೂವರು ಸಿಬ್ಬಂದಿ ನಡೆದು ಕೊಂಡೇ ಆನೆ ಗುಂಪುಗಳನ್ನು ಕಂಡು ಈ ಲೆಕ್ಕ ಹಾಕಿದ್ದಾರೆ.
ಎರಡನೇ ದಿನದಂದು ಆನೆ ಲದ್ದಿಯನ್ನು ಪತ್ತೆ ಹಚ್ಚಿ ಒಚಿಟಿ ಆನೆಯೋ, ಗುಂಪುಗಳ ಆನೆಯೋ ಎಂದು ಆ ಪರಿಸರದಲ್ಲಿ ಆನೆಗಳ ಅಂದಾಜು ಲೆಕ್ಕ ಹಾಕಲಾಗುತ್ತದೆ. ಮೂರನೇ ದಿನ ಕೆರೆಗಳ ಬಳಿ ಸಿಬ್ಬಂದಿ ಬೆಳಗ್ಗೆಯಿಂದ ಸಂಜೆವರೆಗೆ ಕಾದು ನೀರು ಕುಡಿಯುವಾಗ ಬರುವ ಆನೆಗಳನ್ನು ಸಿಬ್ಬಂದಿ ಲೆಕ್ಕ ಹಾಕಲಿದ್ದಾರೆ. ಒಟ್ಟಾರೆಯಾಗಿ 3 ದಿನಗಳಲ್ಲಿ ಕಂಡ ಆನೆಗಳ ಲೆಕ್ಕವನ್ನು ತುಲನಾತ್ಮಕವಾಗಿ ಪರಿಶೀಲಿಸಿ ಆನೆಗಳ ಅಂದಾಜು ಲೆಕ್ಕವನ್ನು ಹಾಕಲಾಗುತ್ತದೆ ಎಂದು ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್‍ಟಿ) ಡಿಸಿಎಫ್‍ದೀಪ್.ಜೆ ತಿಳಿಸಿದ್ದಾರೆ.
4 ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆ ಗಣತಿ:
ಇದು ಎರಡನೇ ಆನೆ ಗಣತಿಯಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ಆನೆ ಗಣತಿ ನಡೆಯುತ್ತಿದೆ. ಆನೆಗಳ ಬಾಹ್ಯ ಗಾಯಗಳು, ದಂತದಗಾತ್ರ ಮತ್ತು ಅದರದಂತ ವಿಲ್ಲದ ಗಂಡು ಆನೆ ಸಂಖ್ಯೆಯನ್ನೂ ಪತ್ತೆ ಮಾಡಲಾಗುತ್ತದೆ. ಆನೆಗಳ ನಡವಳಿಕೆ ಮತ್ತು ಚಲನವಲನಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತದೆ.