ಲೋಕಾಯುಕ್ತ ದಾಳಿ: ದಾಖಲೆ ಪರಿಶೀಲನೆ
ಚನ್ನಪಟ್ಟಣ.ಮೇ.೨೪- ಪಟ್ಟಣದ ನಗರಸಭೆಯಲ್ಲಿ ಅಕ್ರಮ ಇ-ಖಾತೆಗಳನ್ನು ಮಾಡುವ ಜೊತೆಗೆ ಲಂಚ ಪಡೆಯುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಪಟ್ಟಣದ ನಗರಸಭೆಯಲ್ಲಿ ಅಕ್ರಮ ಇ-ಖಾತೆ ಮಾಡಿಕೊಡಲು ಲಕ್ಷಾಂತರ ರೂ. ಲಂಚ ಪಡೆಯುತ್ತಿದ್ದಾರೆ ಎಂದು ನಗರಸಭಾ ಅಧ್ಯಕ್ಷರು ಹಾಗೂ ಸದಸ್ಯರು ನಗರಸಭಾ ಪೌರಾಯುಕ್ತ ಪುಟ್ಟಸ್ವಾಮಿ ಸೇರಿದಂತೆ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಸೇರಿದಂತೆ ಲೋಕಾಯುಕ್ತಕ್ಕೆ ದೂರನ್ನು ಸಲ್ಲಿಸಿದ್ದರು.
ಪಟ್ಟಣದ ಎಲೆಕೇರಿಯ ಸಾಕಮ್ಮ ಪ್ರಾಪರ್ಟೀಸ್‌ನ ೧೦೩ ನಿವೇಶನಗಳಿಗೆ ಅಕ್ರಮವಾಗಿ ಇ-ಖಾತೆ ಮಾಡಲು ಮುಂದಾಗಿದ್ದಾರೆ ಎಂಬ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದರು ಎನ್ನಲಾಗಿದ್ದು, ಈ ಎಲ್ಲಾ ಪ್ರಕರಣಗಳನ್ನು ಮುಂದಿಟ್ಟು ನಗರಸಭೆಗೆ ಬಂದಿಳಿದ ಲೋಕಾಯುಕ್ತ ಡಿವೈಎಸ್ಪಿಗಳಾದ ಗೌತಮ್, ಅನಂತರಾಮು, ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್, ಸುಧೀರ್ ಸೇರಿದಂತೆ ೧೦ ಕ್ಕೂ ಹೆಚ್ಚು ಸಿಬ್ಬಂದಿಗಳು ಅಧಿಕಾರಿಗಳ ವಿಚಾರಣೆ ಮಾಡಿದ್ದು ಸಾರ್ವಜನಿಕರ ದೂರಿಗೆ ಸಂಬಂದಿಸಿದ ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಲು ಮುಂದಾಗಿದ್ದಾರೆ.
ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ನಗರಸಭಾ ಆಯುಕ್ತ ಪ್ರಶಾಂತ್ ಮತ್ತು ಜೆಡಿಎಸ್ ಬೆಂಬಲಿತ ನಗರಸಭಾ ಸದಸ್ಯರು ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು ಲಂಚ ಕೊಟ್ಟರೆ ಕ್ರಮಬದ್ದ ದಾಖಲೆ ಇಲ್ಲದಿದ್ದರೂ ಅಕ್ರಮ ಹಾಗೂ ಅನಧಿಕೃತ ಇ-ಖಾತೆಗಳನ್ನು ಮಾಡಿಕೊಡಲಾಗುತ್ತಿದೆ. ಎಲ್ಲಾ ದಾಖಲೆ ಇದ್ದರೂ ಅವರಿಗೆ ಇ-ಖಾತೆ ಮಾಡಿಕೊಡದೆ ಸಬೂಬು ಹೇಳುತ್ತಿದ್ದಾರೆ. ೨೦ ಸಾವಿರದಿಂದ ೧ ಲಕ್ಷ ರೂ. ವರೆಗೆ ಲಂಚ ಪಡೆದು ಇ-ಖಾತೆ ಮಾಡಿಕೊಡಲಾಗುತ್ತಿದೆ ಎಂದು ನಗರಸಭಾ ಆಯುಕ್ತ ಪುಟ್ಟಸ್ವಾಮಿ ಸೇರಿದಂತೆ ನಗರಸಭೆಯ ಎಲ್ಲಾ ವಿಭಾಗದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಪೌರಾಡಳಿತ ಇಲಾಖೆ ಕಾರ್ಯದರ್ಶಿಗಳಿಗೆ ಸಹ ದೂರು ನೀಡಿದ್ದರು. ಅಲ್ಲದೆ ಪೌರಾಯುಕ್ತರನ್ನು ವಜಾ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.