ಪ್ರಸನ್ನ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ
ಕೋಲಾರ,ಮೇ,೨೪- ನಗರದ ಅಮ್ಮವಾರಿಪೇಟೆಯ ಶ್ರೀಪ್ರಸನ್ನ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ವೈಭವದಿಂದ ನಡೆದಿದ್ದು, ನೂರಾರು ಮಂದಿ ಭಕ್ತರು ಹನುಮನ ಪೂಜೆಯಲ್ಲಿ ಪಾಲ್ಗೊಂಡು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಆಂಜನೇಯಸ್ವಾಮಿ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಿದ್ದು, ಮಧ್ಯಾಹ್ನ ೧೨-೩೦ ರ ಸುಮಾರಿಗೆ ಕಟಕ ಲಗ್ನದಲ್ಲಿ ರಥಾರೋಹಣ ನಡೆದಿದ್ದು, ಇದರ ಅಂಗವಾಗಿ ಸ್ವಸ್ತಿವಾಚನ, ಕುಂಬಾರಾಧನೆ, ಬಲಿಹರಣ, ಪ್ರಾಯಶ್ಚಿತ್ತಹೋಮ, ರಥಬಲಿ, ರಥ ಪ್ರತಿಷ್ಟೆ, ನಿತ್ಯಹೋಮ, ಧೂಳೋತ್ಸವ ಪೂಜಾವಿಧಿಗಳು ನೆರವೇರಿತು.
ರಥೋತ್ಸವದ ಮುನ್ನಾದಿನ ಸೀತಾರಾಮ ಕಲ್ಯಾಣೋತ್ಸವ ನಡೆದಿದ್ದು, ಸಂಪ್ರದಾಯಬದ್ದವಾಗಿ ಈ ಭಾಗದ ಆರ್ಯಾವೈಶ್ಯ ಕುಲಭಾಂಧವರು ಪೂಜಾ ವಿಧಾನಗಳಲ್ಲಿ ಪಾಲ್ಗೊಂಡಿದ್ದರು.
ಪೂಜೆ ಮತ್ತು ಸ್ವಾಮಿಗೆ ಅಲಂಕಾರವನ್ನು ದೇವಾಲಯದ ಅರ್ಚಕರಾದ ಎ.ಆರ್.ವೆಂಕಟೇಶಾಚಾರ್‍ಲು, ಎ.ವಿ.ಸುನೀಲ್ ಭಾರಧ್ವಾಜ್, ಅನಂತಾಚಾರ್‍ಲು ಮತ್ತಿತರರು ವಹಿಸಿದ್ದು, ಸಹಸ್ರಾರು ಭಕ್ತರು ಇಡೀ ದಿನ ದೇವಾಲಯಕ್ಕೆ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ರಥೋತ್ಸವಕ್ಕೂ ಮುನ್ನಾ ನಡೆದ ಪೂಜೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಅನಿಲ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಅಮ್ಮವಾರಿಪೇಟೆ ಆರ್ಯವೈಶ್ಯ ಸಂಘದ ಅಧ್ಯಕ್ಷ ಬಿ.ಎಸ್.ಗೋವಿಂದರಾಜು ಪೂಜಾ ಕಾರ್ಯಗಳ ನೇತೃತ್ವ ವಹಿಸಿದ್ದು, ಈ ದೇವಾಲಯದಲ್ಲಿ ನಿತ್ಯ ಪೂಜಾವಿಧಿಗಳನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಹೋಗಲು ನಮ್ಮ ಸಂಘ ಕಂಕಣಬದ್ದವಾಗಿದೆ ಎಂದು ತಿಳಿಸಿದರು.
ದೇವಾಲಯದ ಅಭಿವೃದ್ದಿಗೆ ಅಗತ್ಯ ಕ್ರಮವಹಿಸಲಾಗಿದೆ, ದೇವಾಲಯದ ಆವರಣದಲ್ಲಿ ಸ್ವಚ್ಚತೆ ಕಾಪಾಡುವಲ್ಲಿಯೂ ಕ್ರಮವಹಿಸಲಾಗಿದೆ, ನಿರಂತರವಾಗಿ ಸ್ವಾಮಿಯ ಪೂಜೆಗೆ ಯಾವುದೇ ಅಡಚಣೆ ಇಲ್ಲದಂತೆ ಕ್ರಮವಹಿಸಿದ್ದು, ದೇವಾಲಯದ ಸಕಲ ಅಭಿವೃದ್ದಿಗೆ ಈ ಭಾಗದ ಆರ್ಯವೈಶ್ಯ ಕುಲಬಾಂಧವರು ಸಿದ್ಧರಿದ್ದಾರೆ ಎಂದು ತಿಳಿಸಿದರು.
ಅಮ್ಮವಾರಿಪೇಟೆ ಆರ್ಯವೈಶ್ಯ ಸಂಘದ ಅಧ್ಯಕ್ಷ ಬಿ.ಎಸ್.ಗೋವಿಂದರಾಜು, ಮಾಜಿ ಅಧ್ಯಕ್ಷ ಎ.ಜಿ.ಗೋವಿಂದರಾಜು, ಉಪಾಧ್ಯಕ್ಷ ಬಿ.ಎಂ.ಅರ್ಜುನ್, ಕಾರ್ಯದರ್ಶಿ ಶ್ರೀಕಾಂತ್, ನಿರ್ದೇಶಕರಾದ ಎ.ವಿ.ರಾಜೇಶ್, ಕೆ.ಆರ್.ಶಿವ, ವಿ.ಪಿ.ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.