ಸೀತನೂರಿನಲ್ಲಿ ಸಿಡಿಲಿಗೆ ಎತ್ತುಬಲಿ: ರೈತ ಕುಟುಂಬಕ್ಕೆ ಶಾಸಕ ಅಲ್ಲಮಪ್ರಭು ಸಾಂತ್ವನ
ಕಲಬುರಗಿ:ಮೇ.23: ನಗರದಲ್ಲಿ ಗುರುವಾರ ಸಂಜೆ ಜೋರಾಗಿ ಹಾಗೂ ರಭಸದಿಂದ ಬೀಸಿದ ಬಿರುಗಾಳಿ, ಸಿಡಿಲಿನ ಹೊಡೆತಕ್ಕೆ ಎತ್ತು ಸಾವನ್ನಪ್ಪಿರುವ ಧಾರುಣ ಘಟನೆ ತಾಲ್ಲೂಕಿನ ಸೀತನೂರಲ್ಲಿ ಸಂಭವಿಸಿದೆ.
ಗ್ರಾಮದ ರೈತ ಅಂಬಾರಾಯ್‍ಗುರುಣ್ಣ ಕಣ್ಣಿ (ಸ.ನಂ 10) ಅವರಿಗೆ ಸೇರಿದ್ದ ಎತ್ತು ಇದಾಗಿತ್ತು. ಎಂದಿನಂತೆ ಅವರು ಹೊಲದಲ್ಲಿ ಮರದ ಕೆಳಗೆ ಎತ್ತುಗಳನ್ನು ಕಟ್ಟಿ ಮೇವು ಹಾಕಿದ್ದರು. ಸಿಡಿಲಿನ ಅಬ್ಬರ ಶುರುವಾದಾಗ ಎತ್ತುಗಳು ಮರದ ಕೆಳಗೇ ಇದ್ದವು. ಸಿಡಿಲು ರಭಸದಿಂದ ಅಪ್ಪಳಿಸದ್ದರಿಂದ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ.
ಸಿಡಿಲಿಗೆ ಎತ್ತು ಬಲಿಯಾದ ಸುದ್ದಿ ತಿಳಿದ ತಕ್ಷಣ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ತಕ್ಷಣ ಅಂಬಾರಾಯ್ ಕಣ್ಣಿ ಅವರ ಹೊಲಕ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ನೊಂದ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಂಜೆ 5 ಗಂಟೆಗೆ ಸಿಡಿಲು ಬಿದ್ದು ಎತ್ತು ಸಾವನ್ನಪ್ಪಿದೆ, ಮರುಕ್ಷಣವೇ 6 ಗಂಟೆಯೊಳಗೆ ಶಾಸಕರು ದುರಂತದ ಸ್ಥಳದಲ್ಲಿದ್ದು ಸಾಂತ್ವನ ಹೇಳಿದ್ದಲ್ಲದೆ ತಕ್ಷಣ ಸಂಬಂಧಪಟ್ಟಂತಹ ಎಲ್ಲರಿಗೂ ಮಾತನಾಡಿ ರೈತನ ನೆರವಿಗೆ ಬರುವಂತೆ ಸೂಚಿಸಿದರು.
ಸೀತನೂರ್ ಊರಲ್ಲಿ ಬಾಳೆ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳು ನೆಕ್ಕುರುಳಿವೆ. ಇದಲ್ಲದೆ ಊರಲ್ಲಿನ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿದಾಗಿ ಊರಲ್ಲಿ ಕಗ್ಗತ್ತಲು ಆವರಿಸಿದೆ. ಊರಿನ ಜನರು ಸಿಡಿಲಿನಿಂದ ಸಾವನ್ನಪ್ಪಿದ ಎತ್ತಿನ ಮಾಲೀಕರಾದ ಅಂಬಾರಾಯ್ ಅವರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಊರಲ್ಲಿ ಗಾಳಿ, ಮಳೆ ಹೊಡೆತಕ್ಕೆ ಧರೆಗೆ ಉರುಳಿರುವ ದೀಪದ ಕಂಬಗಳನ್ನು ಆದಷ್ಟು ಬೇಗ ದುರಸ್ಥಿ ಮಾಡಿ ಮತ್ತೆ ಎಂದಿನಂತೆ ವಿದ್ಯುತ್ ಪೂರೈಕೆ ಆಗುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಊರವರು ಶಾಸಕರಿಗೆ ಆಗ್ರಹಿಸಿದರು. ಸ್ಥಳದಲ್ಲೇ ಅಲ್ಲಂಪ್ರಭು ಪಾಟೀಲರು ಜೆಸ್ಕಾಂ ಅಧಿಕಾರಿಗಳಿಗೆ ಮಾತನಾಡುತ್ತ ತಕ್ಷಣ ಸೀತನೂರ್ ಹಾಗೂ ಸುತ್ತಲಿನ ಗ್ರಾಮಗಳ ಕರೆಂಟ್ ಕಂಬಗಳ ಸಮಸ್ಯೆಗೆ ಪರಿಹಾರ ನೀಡುವಂತೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪವನಕುಮಾರ್ ವಳಕೇರಿ, ಲಿಂಗರಾಜ್ ಕಣ್ಣಿ, ಭೀಮರಾವ್ ಮೇಳಕುಂದಾ, ಗೌತಮ್ ಸೇರಿದಂತೆ ಗ್ರಾಮದ ಮುಖಂಡರು, ರೈತರು, ರೈತ ಕುಟುಂಬದವರು ಸ್ಥಳದಲ್ಲಿದ್ದು, ಸೀತನೂರು ಹಾಗೂ ಸುತ್ತಮುತ್ತ ಮಳೆ, ಸಿಡಿಲಿನಿಂದಾದ ಅನಾಹುತಗಳನ್ನು ಶಾಸಕರಿಗೆ ವಿವರಿಸಿ ಬೇಗ ಪರಿಹಾರಕ್ಕೆ ಆಗ್ರಹಿಸಿದರು.