ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರಿಗೆ ಶರಣಾಂಜಲಿ
ಕಲಬುರಗಿ:ಮೇ.23: ಬೀದರನ ಬಸವ ಸೇವಾ ಪ್ರತಿಷ್ಠಾನದ ಮುಖ್ಯಸ್ಥರು ಹಾಗೂ ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರಾದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರು ಲಿಂಗೈಕ್ಯರಾದ ಪ್ರಯುಕ್ತ ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಶರಣಾಂಜಲಿ ಸಲ್ಲಿಸಿ ಗೌರವಿಸಲಾಯಿತು.
ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಪೂಜ್ಯ ಅಕ್ಕನವರು ಮಾತೃ ಹೃದಯಿ ಗುಣ ಹೊಂದಿದ್ದರು. ಬಸವ ತತ್ವದ ಪ್ರಚಾರಕ್ಕಾಗಿಯೇ ಇಡೀ ತಮ್ಮ ಜೀವನವನ್ನು ಸವೆಸಿದವರು. ನಾಡಿನೆಲ್ಲೆಡೆ ಪ್ರವಚನಗಳ ಮೂಲಕ ಬಸವ ಪ್ರಜ್ಞೆಯನ್ನು ಜಾಗೃತಿಗೊಳಿಸಿದ್ದಾರೆ. ಬೀದರನ ಬಸವಗಿರಿಯಲ್ಲಿ ಪ್ರತಿವರ್ಷ ಆಚರಿಸುತ್ತಿದ್ದ ವಚನ ವಿಜಯೋತ್ಸವ ದೇಶದ ಗಮನ ಸೆಳೆಯುವಂತೆ ಮಾಡಿದವರು. ವ್ಯಕ್ತಿಗೆ ಪಟ್ಟಾಭಿಷೇಕದ ಸಂಪ್ರದಾಯವನ್ನು ಬಿಟ್ಟು ಬಸವಾದಿ ಶರಣರು ರಚಿಸಿದ ಲಿಂಗಾಯತ ಧರ್ಮ ಗ್ರಂಥಗಳಾದ ವಚನಗಳಿಗೆ ಪಟ್ಟಾಭಿಷೇಕ ಮಾಡುವ ಪದ್ಧತಿ ಅನುಸರಿಸಿ ಮಾದರಿಯಾದವರು. ಶರಣ ತತ್ವ ಮತ್ತು ಸಮಾಜಕ್ಕೆ ಅವರ ಕೊಡುಗೆ ಅನನ್ಯವಾಗಿದೆ ಎಂದು ನುಡಿನಮನ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಪ್ರಮುಖರಾದ ರಘುನಂದನ ಕುಲಕರ್ಣಿ, ನಿಲೊಫರ್ ಶೇಖ್, ಪೂಜಾ ಜಮಾದಾರ, ಶಿವರಾಜ ವಿ.ಚಿಂಚೋಳಿ, ಶ್ರೀಕಾಂತ, ಸಚಿನ್ ಘೋಟಕೆ, ಸತೀಶ್ ಚಿಂಚೋಳಿ, ಅನೀಲ ಜವಳಿ, ಅಭಿಷೇಕ ಕೊರಳ್ಳಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.