ಅಫಜಲಪುರ ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ ಸಮಸ್ಯೆಗಳ ಅನಾವರಣ: ಅವ್ಯವಸ್ಥೆಗೆ ಅಧಿಕಾರಿಗಳು ಕೆಂಡ
ಅಫಜಲಪುರ,ಮೇ 23: ಲೋಕಾಯುಕ್ತ ಎಸ್ಪಿ ಜಾನ್ ಅಂಟೋನಿ ಹಾಗೂ ತಂಡದವರು ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ಘಟನೆ ನಡೆಯಿತು.
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ, ಉಪಾಹಾರವಿಲ್ಲ, ಸಂತಾನಶಕ್ತಿ ಹರಣ ಚಿಕಿತ್ಸೆಗೆ ಹಣ ವಸೂಲಿ, ದನಗಳ ವಾಸಕ್ಕೂ ಯೋಗ್ಯವಿಲ್ಲದಂಥ ಸರ್ಕಾರಿ ಆಸ್ಪತ್ರೆ. ಸಾಲು-ಸಾಲು ಸಮಸ್ಯೆಗಳು
ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಕರಜಗಿಯ ಮಹಿಳೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಡಿ ಗ್ರೂಪ್ ನೌಕರ 2000 ರೂ. ಲಂಚ ತೆಗೆದುಕೊಂಡಿದ್ದಾನೆ ಎಂದು ಲೋಕಾಯುಕ್ತ ಡಿವೈಎಸ್‍ಪಿ ಗೀತಾ ಬೇನಾಳ ಮುಂದೆ ಮಹಿಳೆ ತಾಯಿ ದೂರಿದರು. ಈ ಬಗ್ಗೆ ವಿಚಾರಿಸಿದಾಗ ನೌಕರ ಹಣ ಪಡೆದಿದ್ದು ಒಪ್ಪಿಕೊಂಡ. ಹಣ ಮರಳಿ ಕೊಡಿಸಿ ಪ್ರಕರಣ ದಾಖಲಿಸಿದರು. ಹೆರಿಗೆಗೆ ಗರ್ಭಿಣಿಯರನ್ನು ನಾಲೈದು ಗಂಟೆ ಕಾಯಿಸಿ ಕೊನೇ ಘಳಿಗೆಯಲ್ಲಿ ನಮ್ಮಿಂದ ಆಗಲ್ಲ. ಕಲಬುರಗಿಗೆ ಹೋಗಿ ಎನ್ನುತ್ತಾರೆ ಎಂದು ದೂರಿದರು.
ಆಸ್ಪತ್ರೆ ಅಧಿಕಾರಿ ತರಾಟೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರು ಭೇಟಿ
ನೀಡಿ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಇಲ್ಲಿ ಮನುಷ್ಯರಲ್ಲ, ಜಾನುವಾರು ವಾಸಕ್ಕೂ ಯೋಗ್ಯವಿಲ್ಲ. ಡಿ ಗ್ರೂಪ್ ನೌಕರರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಶೌಚಗೃಹ ಬಳಕೆ ಇಲ್ಲ ಎಂದು ವೈದ್ಯಾಧಿಕಾರಿ ಡಾ.ವಿನೋದಕುಮಾರ ರಾಠೋಡ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸೌಲಭ್ಯ ನೀಡಲು ಆಗದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಹರಿಹಾಯ್ದರು.
ಅಫಜಲಪುರ ತಹಸಿಲ್ ಕಚೇರಿಯಲ್ಲಿ ಬುಧವಾರ ಲೋಕಾಯುಕ್ತ ಎಸ್‍ಪಿ ಜಾನ್ ಆಂಟೋನಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಡಿವೈಎಸ್‍ಪಿ ಗೀತಾ ಬೇನಾಳ, ಸಿಪಿಐ ರಾಜಶೇಖರ, ತಹಸೀಲ್ದಾರ್ ಸಂಜೀವಕುಮಾರ ದಾಸರ ಇತರರಿದ್ದರು.