ಜನನ – ಮರಣ ನೋಂದಣಿ ಪತ್ರಗಳು ಮಹತ್ವದ ದಾಖಲೆ:ಸುವರ್ಣಾ
ಬೀದರ. ಮೇ. 23: ಜನನ – ಮರಣ ನೋಂದಣಿ ಪತ್ರಗಳು ಮಹತ್ವದ ದಾಖಲೆಗಳಾಗಿದ್ದು, ಅವುಗಳನ್ನು ನೀಡುವಾಗ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಸುವರ್ಣಾ ರವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಜನನ- ಮರಣ ಉಪ ನೋಂದಣಾಧಿಕಾರಿಗಳಾದ ಗ್ರಾಮ ಪಂಚಾಯತ ಕಾರ್ಯದರ್ಶಿಗಳು ಹಾಗೂ ಡಾಟಾ ಎಂಟ್ರಿ ಅಪ್ರೇಟರ್‍ಗಳಿಗೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೀದರ ಜಿಲ್ಲೆಯಲ್ಲಿ ಜನನ – ಮರಣ ನೋಂದಣಿ ಶೇ. 100% ರಷ್ಟು ಮಾಡುವುದು ಉದ್ದೇಶವಾಗಿದೆ. ಅದರಂತೆ ವಿಮಾ ಹಣ ಪಡೆಯಲು, ಆಸ್ತಿಯ ಹಕ್ಕನ್ನು ನಿರ್ಧಾರ ಮಾಡಲು, ಪಿಂಚಣಿ ಹಕ್ಕು ಹೊಂದಲು ಅನುಕಂಪದ ಆಧಾರದ ನೌಕರಿ, ಅಪಘಾತ ಪರಿಹಾರ ಪಡೆಯಲು ಮುಂತಾದ ವಿಷಯಗಳಲ್ಲಿ ಜನನ – ಮರಣ ಪ್ರಮಾಣ ಪತ್ರ ಅಗತ್ಯ ಇರುತ್ತದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ತಮಗೆ ವಹಿಸಿದ ಕೆಲಸಕಾರ್ಯವನ್ನು ಜವಾಬ್ದಾರಿಯಿಂದ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ (ಆಡಳಿತ) ಜಯಪ್ರಕಾಶ ಚಹ್ವಾಣ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳ ಕಾರ್ಯದರ್ಶಿಗಳು ಹಾಗೂ ಡಾಟಾ ಎಂಟ್ರಿ ಅಪ್ರೇಟರ್‍ಗಳು ಹಾಜರಿದ್ದರು.