ಪ್ಲಾಸ್ಟಿಕ್‌ಮುಕ್ತ ಗ್ರಾಮಗಳನ್ನಾಗಿಸಲು ನಾಗರೀಕರ ಸಹಕಾರ ಅಗತ್ಯ
ಗೌರಿಬಿದನೂರು,ಮೇ.೨೩- ಪರಿಸರಕ್ಕೆ ಪ್ಲಾಸ್ಟಿಕ್ ವಸ್ತು ಮತ್ತು ತ್ಯಾಜ್ಯಗಳು ಮಾರಕವಾಗಿದ್ದು ಅವುಗಳ ಬಳಕೆಯನ್ನು ನಿರ್ಬಂಧಿಸುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಹಕಾರಿಯಾಗೋಣ ಎಂದು ತಾ.ಪಂ ಇಒ ಜಿ.ಕೆ.ಹೊನ್ನಯ್ಯ ತಿಳಿಸಿದರು.
ತಾಲ್ಲೂಕಿನ ತೊಂಡೇಬಾವಿ ಗ್ರಾ.ಪಂ ವ್ಯಾಪ್ತಿಯ ತೊಂಡೇಬಾವಿ ರೈಲ್ವೆ ಸ್ಟೇಷನ್ ವ್ಯಾಪ್ತಿಯಲ್ಲಿನ ಅಂಗಡಿ ಮಳಿಗೆಗಳಿಗೆ ಶುಕ್ರವಾರ ಭೇಟಿ ನೀಡಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದಂತೆ ಅಂಗಡಿ ಮಾಲೀಕರು ಮತ್ತು ಗ್ರಾಹಕರಿಗೆ ಎಚ್ಚರಿಕೆ ನೀಡಿ ಅವರು ಮಾತನಾಡಿದರು.
ಮಿತಿ ಮೀರಿದ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡದಂತೆ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅಂಗಡಿ ಮುಂಗಟ್ಟುಗಳು, ಹೋಟೆಲ್, ಬೇಕರಿ ಸೇರಿದಂತೆ ಇತರೆಡೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಮುಕ್ತಗೊಳಿಸಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಅಂಗಡಿ ಮಾಲೀಕರು ಪ್ರಮುಖ ಪಾತ್ರ ವಹಿಸಬೇಕು.
ನಿತ್ಯ ಅಂಗಡಿಗಳಿಗೆ ಬರುವ ಗ್ರಾಹಕರು ಮತ್ತು ನಾಗರೀಕರಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಪೇಪರ್ ಮತ್ತು ಸಾವಯವ ವಸ್ತುಗಳಿಂದ ಮಾಡಿದ ಕವರ್ ಗಳನ್ನು ಬಳಕೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕಾಗಿದೆ. ಹಂತಹಂತವಾಗಿ ಗ್ರಾ.ಪಂ, ಗ್ರಾಮಗಳು ಮತ್ತು ಸಮುದಾಯದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡ್ಡಾಯವಾಗಿ ನಿಯಂತ್ರಣ ಮಾಡಬೇಕು, ಇದಕ್ಕಾಗಿ ಗ್ರಾ.ಪಂ ಪಿಡಿಒ ಸೇರಿದಂತೆ ಎಲ್ಲ ಸಿಬ್ಬಂದಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಪಿಡಿಒ ಬಸವರಾಜ್ ವಿ.ಬಳೂಟಗಿ ಮಾತನಾಡಿ, ಜಿ.ಪಂ ಸಿಇಒ ಮತ್ತು ತಾ.ಪಂ ಇಒ ರವರ ನಿರ್ದೇಶನದ ಮೇರೆಗೆ ಗ್ರಾ.ಪಂ ವ್ಯಾಪ್ತಿಯಲ್ಲಿನ ಪ್ರತೀ ಗ್ರಾಮಗಳಲ್ಲಿನ ನಾಗರೀಕರು ಮತ್ತು ಅಂಗಡಿ ಮಾಲೀಕರು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಮುಕ್ತ ಮಾಡುವಂತೆ ತಿಳಿಸಲಾಗಿದೆ. ಮನೆಗಳಲ್ಲಿ ನಿತ್ಯ ಸಂಗ್ರಹವಾಗುವ ಹಸಿ ಮತ್ತು ಒಣಕಸವನ್ನು ಬೇರ್ಪಡಿಸಿ ಟಿಪ್ಪರ್ ಮೂಲಕ ಸಂಗ್ರಹಣೆ ಮಾಡಿ ಕಸ ವಿಲೇವಾರಿ ಘಟಕಕ್ಕೆ ರವಾನಿಸಲಾಗುತ್ತಿದೆ. ಇದರೊಂದಿಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಯಂತ್ರಣ ಮಾಡಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ತಾ.ಪಂ ನರೇಗಾ ಸಹಾಯಕ ನಿರ್ದೇಶಕರಾದ ಕರಿಯಪ್ಪ, ವ್ಯವಸ್ಥಾಪಕರಾದ ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.