ಪತಿ ಮೇಲೆ ಪತ್ನಿ ಹಲ್ಲೆ
ಕಲಬುರಗಿ,ಸೆ.23-ಪತಿಯ ಮೇಲೆ ಪತ್ನಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಗುಲಷನ್ ಅರಾಫತ್ ಕಾಲೋನಿಯಲ್ಲಿ ನಡೆದಿದೆ.
ಈ ಸಂಬಂಧ ಎಎಸ್‍ಐ ಅಪ್ಸರ್ ಮಿಯಾ ಪಟೇಲ್ (53) ಅವರು ಪತ್ನಿ ಖನೀಜ್ ಫಾತಿಮಾ ಅವರ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪತ್ನಿ ಖನೀಜ್ ಫಾತಿಮಾ ದಿನಾಲು ಮನೆಯಲ್ಲಿ ಸಣ್ಣಪುಟ್ಟ ವಿಷಯಕ್ಕೆ ಜಗಳ ತೆಗೆಯುತ್ತಿದ್ದಳು. ಹೋಗಲಿ ಬಿಡು ಎಂದು ಸುಮ್ಮನಾಗಿದ್ದೆ. ಸೆ.22 ರಂದು ಬೆಳಿಗ್ಗೆ 10 ಗಂಟೆಗೆ ಏಕಾಏಕಿಯಾಗಿ ಜಗಳ ತೆಗೆದು ಬೈಯ್ಯುತ್ತಿದ್ದಳು. “ಏಕೆ ಬೈಯ್ಯುತ್ತಿರುವೆ” ಎಂದು ಕೇಳಿದಕ್ಕೆ, ತವರು ಮನೆಯವರನ್ನು ಕರೆಯಿಸಿ ಹೊಡೆಸುತ್ತೇನೆ ನಿನ್ನದು ಬಹಳ ಆಗಿದೆ ಎಂದಾಗ “ಯಾರನ್ನಾದರು ಕರೆಸು” ಎಂದಿದ್ದೆ. ಆಗ ಸೋಫಾ ಮೇಲೆ ಕುಳಿತಿದ್ದ ನನ್ನ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದು, ಬಲಗೈ ಮೊಣಕೈಗೆ ಮತ್ತು ಬೆನ್ನಿಗೆ ಗಾಯವಾಗಿದೆ. ಹಲ್ಲೆ ನಡೆಸಿದಷ್ಟೇ ಅಲ್ಲದೆ ಅವಾಚ್ಯವಾಗಿ ಬೈಯ್ದು ಜೀವ ಬೆದರಿಕೆ ಹಾಕಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ವಿಶ್ವವಿದ್ಯಾಲಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.