ಬಹುತ್ವ ಭಾರತದ ಉಳಿವಿಗಾಗಿ ಎಲ್ಲರೂ ಶ್ರಮಿಸಿ: ಡಾ. ಶಾಂತಾ ಅಷ್ಟಗಿ
ಕಲಬುರಗಿ:ಸೆ.23: ಸಮಾಜದಲ್ಲಿ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಬಹುತ್ವ ಭಾರತದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಡಾ. ಶಾಂತಾ ಅಷ್ಟಗಿ ಅವರು ಹೇಳಿದರು.
ನಗರದಲ್ಲಿ ಜರುಗಿದ ಭಾರತ ವಿದ್ಯಾರ್ಥಿ ಫೆಡರೇಶನ್‍ನ 12ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಬಹಳ ಮುಖ್ಯ. ನಾವು ಮೊದಲು ಮನುಷ್ಯರಾಗಬೇಕು. ಸಮಾಜದಲ್ಲಿ ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ನಮಗೆ ಬುದ್ಧ, ಬಸವ, ಅಂಬೇಡ್ಕರ್, ಭಗತಸಿಂಗ್, ಮಹಾತ್ಮಾ ಗಾಂಧಿ ಅವರ ಆದರ್ಶಗಳು ಮಾದರಿಯಾಗಬೇಕು. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಸಮುದಾಯದ ಖಜಾಂಚಿ ಕೋದಂಡರಾಮ್ ಅವರು ಮಾತನಾಡಿ, ಅಭ್ಯಾಸ ಮತ್ತು ಹೋರಾಟದ ಜೊತೆ ಜೊತೆಗೆ ಸಾಗಬೇಕು. ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಈ ಸಂದರ್ಭದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲ ವಿಷಯಗಳಲ್ಲಿ ಪರಿಣಿತಿ ಹೊಂದಿದರೆ ಪರಿಪೂರ್ಣ ವಿದ್ಯಾರ್ಥಿಯಾಗಲು ಸಾಧ್ಯ ಎಂದರು.
ಡಿವೈಎಫ್‍ಐ ರಾಜ್ಯಾಧ್ಯಕ್ಷೆ ಕಾ. ಲವಿತ್ರ ಅವರು ಮಾತನಾಡಿ, ನಮ್ಮ ಮೇಲೆ ಆಗುವ ಅತ್ಯಾಚಾರ, ದೌರ್ಜನ್ಯ ವಂಚನೆ ತಡೆಗಟ್ಟಲು ನಾವು ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಬೇಕು. ಇಂದು ನಿರುದ್ಯೋಗ ಜಾಸ್ತಿಯಾಗಿದೆ. ಓದಿದ ವ್ಯಕ್ತಿಗೆ ಸರಿಯಾದ ನೌಕರಿ ಸಿಗುತ್ತಿಲ್ಲ. ಶಿಕ್ಷಣ ಹಣವುಳ್ಳವರಿಗೆ ಮಾತ್ರ ಸಿಗುವಂತಾಗುತ್ತಿದೆ. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲ. ಅಲ್ಲದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಲ್ಲ ಸಮಸ್ಯೆಗಳನ್ನು ಎದುರಿಸಲು ನಾವು ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ಬದಲಾವಣೆ ಸಾಧ್ಯ. ಅಂದಾಗ ನಮ್ಮ ಮುಂದಿನ ಪೀಳಿಗೆಗೆ ಉಪಯುಕ್ತವಾಗುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲರೂ ಸೇರಿ ಸಂಘಟನೆ ಕಟ್ಟಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಸರ್ವೇಶ್ ಮಾವಿನಕರ್, ಜಿಲ್ಲಾ ಕಾರ್ಯದರ್ಶಿಯಾಗಿ ಸುಜಾತಾ, ಸಹ ಕಾರ್ಯದರ್ಶಿಯಾಗಿ ಭರತ್ ಮತ್ತು ನಾಗಮ್ಮ, ಉಪಾಧ್ಯಕ್ಷರಾಗಿ ಮೇಘಾ, ಪ್ರೇಮ, ಸದಸ್ಯರಾಗಿ ಅಭಿ, ಹುಲಗಮ್ಮ, ಸಾಗರ್, ಕಾವೇರಿ, ತುಷಿತ್, ಮಾಲಾಶ್ರೀ, ಮಂಜು ಅವರು ಆಯ್ಕೆಯಾದರು. ನಾಗಮ್ಮ ಅವರು ಕಾರ್ಯಕ್ರಮ ನಿರೂಪಿಸಿದರು. ದ್ರೌಪದಿ ಅವರು ಸ್ವಾಗತಿಸಿದರು. ಕಾ. ಮಾಲಾಶ್ರೀ ಅವರು ವಂದಿಸಿದರು. ಸಮ್ಮೇಳನದ ಅಂಗವಾಗಿ ರಕ್ತದಾನ ಶಿಬಿರ ಸಹ ಜರುಗಿತು. ಸರ್ವೇಶ್, ಭರತ್ ಹಾಗೂ ವೀರೇಶ್ ಅವರು ರಕ್ತದಾನ ಮಾಡಿದರು.