ಯುವಕನ ಕೊಲೆ: ಆರು ಜನರ ಸೆರೆ
ಕಲಬುರಗಿ,ಸೆ.23-ನಗರ ಹೊರವಲಯದ ನಾಗನಹಳ್ಳಿಯಲ್ಲಿ ಶನಿವಾರ ನಡೆದ ಸುಮೀತ್ ಮಲ್ಲಾಬಾದಿ (18) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದ ಅವರು, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಮ್ಮ , ರಾಜಕುಮಾರ (ದಂಪತಿ) ಮತ್ತು ಅವರ ಪುತ್ರಿ ಹಾಗೂ ಸಿದ್ದು ಅಲಿಯಾಸ್ ಸಿದ್ದಾರಾಮ, ವರುಣಕುಮಾರ ಮತ್ತು ಪ್ರಜ್ವಲ್ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಕೊಲೆಯಾದ ಸುಮೀತ್‍ನ ಅಣ್ಣ ಸಚಿನ್, ರಾಜಕುಮಾರ ಅವರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ರಾಜಕುಮಾರ ಕುಟುಂಬದವರು ಶನಿವಾರ ಸುಮೀತ್ ಮನೆಗೆ ಬಂದು ಜಗಳ ತೆಗೆದಿದ್ದರು. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಇರಿದು ಸುಮೀತ್‍ನನ್ನು ಕೊಲೆ ಮಾಡಲಾಗಿತ್ತು ಎಂದು ವಿವರಿಸಿದರು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಸಬ್-ಅರ್ಬನ್ ಉಪ ವಿಭಾಗದ ಎಸಿಪಿ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿಐ ಸುಶೀಲಕುಮಾರ ನೇತೃತ್ವದಲ್ಲಿ ಪಿಎಸ್‍ಐ ಅನೀಲ ಜೈನ, ಸಿಬ್ಬಂದಿಗಳಾದ ಸಂಜುಕುಮಾರ, ಸುಲ್ತಾನ್, ಪ್ರಕಾಶ (ಮುಖ್ಯಪೇದೆ), ಪ್ರಕಾಶ, ರಾಜಕುಮಾರ, ಕಿಶೋರ, ಈರಣ್ಣ ಮತ್ತು ರೇಣುಕಾ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನಿಬ್ಬರು ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದರು. ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.