ಶಂಕರರ ತತ್ವ ಇಂದಿಗೂ ಪ್ರಸ್ತುತ: ರಾಕೇಶ್ ಭಟ್
ಸಂಜೆವಾಣಿ ನ್ಯೂಸ್
ಮೈಸೂರು, ಮೇ 23:- ಸರ್ವರಿಗೂ ಕಲ್ಯಾಣ ಮಾಡುವವನೇ ಶಂಕರ, ವೇದ ಸಂಸ್ಕೃತಿಯನ್ನು ವಿಶ್ವಕ್ಕೆ ನೀಡಿದ ಶಂಕರಾಚಾರ್ಯರರ ತತ್ವಗಳು ಇಂದಿಗೂ ಪ್ರಸ್ತುತ ಎಂದು ಬಿಜೆಪಿಯ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್ ಹೇಳಿದರು.
ನಗರದ ಬೋಗಾದಿಯ ರವಿಶಂಕರ್ ಲೇಔಟ್ ನಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿ ಅಂಗವಾಗಿ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಮಾತನಾಡಿದ ಅವರು ಎಳೆಯ ವಯಸ್ಸಿನಲ್ಲಿಯೇ ವೇದ ಅಧ್ಯಯನ ಮಾಡಿ ಶಂಕರರು ಪ್ರಸಿದ್ಧರಾಗುತ್ತಾರೆ. ಒಬ್ಬ ಬಡ ವಿಧವೆ ಮನೆಗೆ ಹೋಗಿ ಭಿಕ್ಷೆ ಬೇಡಲು ಅವಳ ಮನೆಯಲ್ಲಿ ಏನೂ ಇರುವುದಿಲ್ಲವಾದ್ದರಿಂದ ಅವಳು ಒಣಗಿದ ಒಂದು ನೆಲ್ಲಿಕಾಯಿಯನ್ನು ಭಿಕ್ಷೆ ಹಾಕುತ್ತಾಳೆ. ಅದರಿಂದ ಸಂತುಷ್ಟರಾಗಿ ಅಲ್ಲಿಯೇ ಕನಕಧಾರಾ ಸ್ತೋತ್ರವನ್ನು ರಚಿಸುತ್ತಾರೆ. ಆ ಮನೆಯನ್ನು ಈಗಲೂ ಕಾಲಟಿಯಲ್ಲಿ ನೋಡಬಹುದಾಗಿದೆ ಎಂದರು.
ದೇಶದ ಮೂಲೆ ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ ತಮ್ಮ ನಾಲ್ಕು ಜನ ಪ್ರಮುಖ ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿ ನಿತ್ಯ ನೈಮಿತ್ತಿಕ ಉಪಾಸನೆ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಸನಾತನ ವೈದಿಕ ಧರ್ಮ ಪುನರುತ್ಥಾನಗೊಳಿಸಿ ಕಾಶ್ಮೀರದ ಸರ್ವಜ್ಞ ಪೀಠಾರೋಹಣ ಮಾಡಿದ ಪ್ರಥಮ ದಾಕ್ಷಿಣಾತ್ಯರು ಶಂಕರರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯ ಮೈಸೂರು ಜಿಲ್ಲಾ ಕಾರ್ಯದರ್ಶಿ ಮೋನಿಕಾ, ಪ್ರಾಣವ್ಯ ಎಜುಕೇಶನ್ ಟ್ರಸ್ಟ್ ನಿರ್ದೇಶಕರಾದ ಸವಿತಾ ಪುಟ್ಟೇಗೌಡ, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ , ನಂಜುಂಡಸ್ವಾಮಿ, ಬಸಪ್ಪ, ವೀರೇಶ್, ಮಾಯ ಶಾನ್ ಬಾಗ್, ರಮ್ಯಾ, ಗೀತಾ, ರವಿಕುಮಾರ್, ಚೆಲುವ ರಾಜು, ಡಾಕ್ಟರ್ ಸುನಿಲ್, ಅರಣ್ಯ ಅಧಿಕಾರಿ ನಂದಕುಮಾರ್, ಭವಾನಿ ಶಂಕರ್, ದೇಶಪಾಂಡೆ, ಭಾಸ್ಕರ್, ರಾಮ್ ಮೂರ್ತಿ, ರಂಗೇಗೌಡ, ಮತ್ತು ಇನ್ನಿತರರು ಹಾಜರಿದ್ದರು.