ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಹೇಗೆ ಬಸವತತ್ವ ಪಾಲಕರಾಗಿರುತ್ತಾರೆ?: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಕಲಬುರಗಿ:ಮೇ.22: ಕ್ರಿಮಿನಲ್ ಹಿನ್ನೆಲೆ ಇರುವವರು ಹೇಗೆ ಬಸವ ತತ್ವಪಾಲಕರಾಗುತ್ತಾರೆ? ಹಿಂದೂ ಧರ್ಮ ಹಾಗೂ ಬಸವ ತತ್ವಗಳು ತಲಾತಲಾಂತರದಿಂದ ಸಮಾಜಕ್ಕೆ ದಾರಿದೀಪವಾಗಿವಾಗಿವೆ ಹಾಗೂ ಇನ್ನೂ ಹಾಗೆಯೇ ಮುಂದುವರೆಯುತ್ತವೆ. ಹಾಗಾಗಿ, ಬಸವ ತತ್ವಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಕ್ರಿಮಿನಲ್‍ಗಳ, ಬಿಜೆಪಿ ಪಕ್ಷದ ಹಾಗೂ ಶ್ರೀರಾಮ ಸೇನೆಯಂತಹ ಕ್ರಿಮಿನಲ್ ಸಂಘಟನೆಯ ಅವಶ್ಯಕತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಸದ ಡಾ. ಉಮೇಶ್ ಜಾಧವ್ ಮತ್ತು ಆಂದೋಲಾ ಶ್ರೀಗಳಿಗೆ ನೇರವಾಗಿ ತಿರುಗೇಟು ನೀಡಿದ್ದಾರೆ.
ಬಸವ ತತ್ವದ ಎಳ್ಳಷ್ಟು ಲವಲೇಶವೂ ಗೊತ್ತಿರದ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ನೀವು ಮಹಾನ್ ವ್ಯಕ್ತಿಯಂತೆ ಬಿಂಬಿಸ ಹೊರಟಿರುವುದು ನಿಜಕ್ಕೂ ನೀವು ಬಸವಣ್ಣನವರಿಗೆ ಮಾಡುತ್ತಿರುವ ಅವಮಾನವಷ್ಟೇ ಅಲ್ಲದೇ ಬಸವ ತತ್ವಕ್ಕೆ ಎಸಗುತ್ತಿರುವ ಅಪಚಾರವಾಗಿದೆ. ಇದನ್ನು ಯಾವ ಬಸವಾಭಿಮಾನಿಯು ಒಪ್ಪಲಾರರು ಎಂದು ಅವರು ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.
ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಭಾಷಣ ಮಾಡುವ ಮೂಲಕ ಜನರಲ್ಲಿ ಕೋಮು ಭಾವನೆ ಕೆರಳಿಸಿರುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ 40 ಪ್ರಕರಣಗಳನ್ನು ಹಾಕಿಸಿಕೊಂಡಿರುವ ವ್ಯಕ್ತಿಗೆ ಜಿಲ್ಲೆಯ ಜನಪ್ರತಿನಿಧಿಯಾಗಿರುವ ನೀವು ಶ್ರೀರಾಮಸೇನೆಯ ಸಂಘಟನೆಯ ವಕ್ತಾರನಂತೆ ವರ್ತಿಸುತ್ತಿರುವುದು ಜಿಲ್ಲೆಯ ಮತದಾರರಿಗೆ ಮಾಡಿದ ಅವಮಾನವಾಗಿದೆ. ನಿಮ್ಮ ಸ್ವಯಂ ಘೋಷಿತ ಸ್ವಾಮೀಜಿಯ ಮೇಲೆ ಈ ಹಿಂದೆ ಅಧಿಕಾರದಲ್ಲಿ ಇದ್ದ ಸರ್ಕಾರಗಳು ಕೇಸು ದಾಖಲಿಸಿವೆ. ಅವರು ಕಾನೂನಿಗೆ ಗೌರವ ಕೊಡುವಂತ ವ್ಯಕ್ತಿಯಾಗಿದ್ದರೆ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲಿಲ್ಲ? ಎಂದು ಜಾಧವ್ ಅವರ ವಿರುದ್ಧ ಕಿಡಿಕಾರಿದ್ದಾರೆ.
ಮಕ್ಕಳ ಹಾಲಿನಪುಡಿ ಹಾಗೂ ಪಡಿತರ ಚೀಟಿಯ ಫಲಾನುಭವಿಗಳ ಅಕ್ಕಿ ಕಳ್ಳತನ ಮಾಡಿ ಶಿಕ್ಷೆಗೆ ಒಳಗಾಗಿ ಹಾಗೂ ಕಾನೂನುಬಾಹಿರ ಚಟುಚಟಿಕೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಗಡಿಪಾರು ಆಗಿದ್ದ ವ್ಯಕ್ತಿಗೆ ಚಿತ್ತಾಪುರದಿಂದ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೊಡಿಸಿ ನೀವು ಒಬ್ಬ ಜವಾಬ್ದಾರಿಯುವ ಜನಪ್ರತಿನಿಧಿಯಾಗಲು ಅರ್ಹರಲ್ಲ ಎಂದು ತೋರಿಸಿಕೊಟ್ಟಿದ್ದೀರಿ ಎಂದು ಜಾಧವ್ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಹಲವಾರು ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳ ಪೆÇೀಷಣೆ ಮಾಡಿ ಅವರಿಗೆ ದತ್ತು ಪಡೆದಿರುವ ನೀವು ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂದೆ ಹಾಗೂ ಜೂಜಾಟಗಳು ಎಗ್ಗಿಲ್ಲದೆ ನಡೆದಿದ್ದವು. ಆಗ, ಮಹಾರಾಷ್ಟ್ರ ರಾಜ್ಯದ ಪೆÇಲೀಸರು ಬಂದು ಬೆಟ್ಟಿಂಗ್ ದಂದೆಯಲ್ಲಿ ಹಾಗೂ ಜೂಜಾಟದಲ್ಲಿ ತೊಡಗಿದವರನ್ನು ಬಂಧಿಸಿದ್ದರು. ಜೊತೆಗೆ ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ರಿಕ್ರಿಯೆಷನ್ ಕ್ಲಬ್ ಗಳು ನಿಮ್ಮ ಆಶೀರ್ವಾದದಿಂದ ತಲೆ ಎತ್ತಿದ್ದು ಮರೆತುಬಿಟ್ಟಿದ್ದೀರಾ? ನಿಮ್ಮ ಚಿಂಚೋಳಿ ತಾಲ್ಲೂಕಿನಿಂದಲೇ ರಾಜ್ಯದ ಅತಿದೊಡ್ಡ ಅಕ್ರಮ ಗಾಂಜಾ ಮಾರಾಟ ಪ್ರಕರಣ ನಡೆದು ಬೇರೆ ರಾಜ್ಯದಿಂದ ಪೆÇಲೀಸರು ಬಂದು ಅಕ್ರಮ ಮಾರಾಟಗಾರರನ್ನು ಬಂಧಿಸಿದ್ದು ಸುಳ್ಳಾ? ಎಂದು ಅವರು ಪ್ರಶ್ನಿಸಿದ್ದಾರೆ.
ಸಂಸದರಾಗಿ ನೀವು ಜನಪರ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ. ಕೇಂದ್ರದ ಹಲವಾರು ಯೋಜನೆಗಳು ವಾಪಸ್ ಹೋದ ಸಂದರ್ಭದಲ್ಲಿ, ಸಾವಿರಾರು ಯುವಕರ ಭವಿಷ್ಯಕ್ಕೆ ಮುಳ್ಳಾಗುವಂತ ಪಿಎಸ್ ಐ ಹಗರಣ ನಡೆದಾಗ, ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾದಾಗ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದೀರಿ ಎಂದು ಅವರು ಟೀಕಿಸಿದ್ದಾರೆ.
ಜಿಲ್ಲೆಯಲ್ಲಿ ಬರಗಾಲದಿಂದ ಜನರು ತತ್ತರಿಸಿ ಹೋಗಿದ್ದಾಗ ಕೇಂದ್ರದಿಂದ ಪರಿಹಾರ ಕೊಡಿಸಲು ಕಿಂಚತ್ತೂ ಪ್ರಯತ್ನಪಡದ ನೀವು ರೈತರ ಪರ ನಿಮ್ಮ ನಿಲುವು ಏನೆಂದು ತೋರಿಸಿಕೊಟ್ಟಿದ್ದೀರಿ. ಈಗ ಜಿಲ್ಲೆಯಲ್ಲಿ ಯಾವುದೇ ದುರ್ಘಟನೆ ನಡೆದರೂ ಕೂಡಾ ಕ್ರಿಮಿನಲ್‍ಗಳನ್ನು ಮುಂದಿಟ್ಟುಕೊಂಡು ನಿಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುರುದು ಸ್ಪಷ್ಟವಾಗುತ್ತಿದೆ. ಜಿಲ್ಲೆಯ ಶಾಂತಿಗೆ ಭಂಗ ತಂದು ಕೋಮುಭಾವನೆ ಕೆರಳಿಸುವಂತ ಯಾವುದೇ ವ್ಯಕ್ತಿಯಾಗಲೀ, ಸ್ವಯಂ ಘೋಷಿತ ಸ್ವಾಮಿಯಾಗಲೀ ಅಥವಾ ಯಾವುದೇ ಸಂಘಟನೆಯಾಗಲಿ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಜೊತೆಗೆ, ಜಿಲ್ಲೆಯಲ್ಲಿರುವ ರೌಡಿ ಶೀಟರ್‍ಗಳ ಹಾಗೂ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಕಂಟಕವಾಗಿರುವವರ ನಿಗ್ರಹಕ್ಕೆ ಕಾನೂನು ಹಾಗೂ ಗೃಹ ಇಲಾಖೆಗಳ ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡುವುದು ಅಲ್ಲದೇ ಅಂತವರ ವಿರುದ್ದ ಕ್ರಿಮಿನಲ್ ಪ್ರಕರಣದ ಹಿನ್ನೆಲೆ, ಬಾಕಿ ವಿಚಾರಣೆ ಹಾಗ ತನಿಖೆಯ ಕುರಿತಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.