ಶರಣರು ಜೀವನಾಮೃತ ನೀಡಿದವರು
ವಿಜಯಪುರ :ಮೇ.23: 12ನೇ ಶತಮಾನದ ಬಸವಾದಿ ಶರಣರು ಆಧ್ಯಾತ್ಮಿಕ, ಸತ್ಯ ತತ್ವಗಳನ್ನು ಸಾಮರಸ್ಯಗೊಳಸಿದವರು. ಅಂತಹ ಶ್ರೇಷ್ಠ ಶರಣರಲ್ಲಿ ವಚನಕಾರ್ತಿ ಶರಣೆ ಸತ್ಯಕ್ಕ ಅವರು ನಮಗೆಲ್ಲಾ ಶರಣ ಮಾರ್ಗದಲ್ಲಿ ನಡೆಯುವುದನ್ನು ಕಲಿಸಿದರು. ಹಾಗೂ ಜೀವನ ಅಮೃತ ನೀಡಿದವರು ಎಂದು ಡಾ. ಸೋಮಶೇಖರ ವಾಲಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಘಟಕ ವೀರಶೈವ ಸಭಾ ಭವನದಲ್ಲಿ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ವಚನಕಾರ್ತಿ ಶರಣೆ ಸತ್ಯಕ್ಕನವರ ಅನುಭಾವ ಕುರಿತು ಮಾತನಾಡುತ್ತಾ, ಅವರು ಶರಣರ ಪರಂಪರೆಯಲ್ಲಿಯೇ ಸಾರ್ಥಕ ಬದುಕನ್ನು ಬಾಳಿದವರು. ‘ಶಂಭು ಜಗ್ಗೇಶ್ವರ’ ಕಾವ್ಯನಾಮದಿಂದ ರಚಿಸಿದ 29 ವಚನಗಳು ಲಭ್ಯವಾಗಿವೆ. ಅವೆಲ್ಲವು ಅಕ್ಕಮಹಾದೇವಿ ಮತ್ತು ಶಿವನನ್ನು ಕುರಿತು ರಚಿಸಿದಂತಹವು. ಆಚಾರ, ವಿಚಾರ, ಜ್ಞಾನ, ಜಂಗಮ ಪ್ರಸಾದ ಕಂಡದ್ದನ್ನು ಕಂಡಂತೆ ನಿತ್ಯ ಬದುಕಿನ ಶರಣರ ಅಂಗಳದಲ್ಲಿ ಕಸಗೂಡಿಸುವ ಕಾಯಕದೊಂದಿಗೆ ನಿಷ್ಕಲ್ಮಶ ವಿಚಾರ, ಪರಿಶುದ್ಧ ಬದುಕು ಕಾಯಕದೊಂದಿಗೆ ಬದುಕು ಕಟ್ಟಿಕೊಂಡವರು. ಶರಣೆ ಸತ್ಯಕ್ಕ ನುಡಿದಂತೆ ನಡೆದು ಇತಿಹಾಸ ಪರಂಪರೆಯಲ್ಲಿಯೇ ಪರಿಪೂರ್ಣತೆ ಸಾಧಿಸಿದವರು. ಅವರ ವಚನಗಳು ಅಮೃತ ನುಡಿ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಎಸ್.ಜೆ. ನಾಡಗೌಡರ ಮಾತನಾಡುತ್ತಾ, ನಮ್ಮ ನಡೆ ನುಡಿ ಇನ್ನೊಬ್ಬರಿಗೆ ಮಾದರಿಯಾದಾಗ ಸಮಾಜದಲ್ಲಿ ನಮ್ಮ ಬದುಕಿಗೆ ಅರ್ಥ ಬರುತ್ತದೆ. ಶರಣರ ಚಿಂತನೆಗಳನ್ನು ಕೇಳಿ ಭಾಗಿಯಾಗುವುದರ ಮೂಲಕ ನಮ್ಮಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಿ ಬದುಕಿಗೆ ಬೇಕಾದ ಆದರ್ಶಗಳನ್ನು ಅಳವಡಿಸಿಕೊಳ್ಳಬಹುದು. ಶರಣೆ ಸತ್ಯಕ್ಕಳ ತತ್ವಗಳ ಪ್ರಚಾರದ ಅಗತ್ಯ ತುಂಬಾ ಇದೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಸತ್ಯಕ್ಕನ ತತ್ವ ಎಂದರೆ ನಿಷ್ಟುರ, ನ್ಯಾಯಯುತ, ವೈರಾಗ್ಯ, ಭಕ್ತಿ, ನೀತಿಯ ಕುರಿತಾಗಿ ರಚಿಸಿದ ವಚನಗಳು ಸತ್ಯಕ್ಕ ಅನವರ್ತಕ ನಾಮವಾಗಿತ್ತು. ಆಧಾರಗಳು ಕಡಿಮೆ. ಹಿರೆಹೊಮ್ಮುರಿನ ಶಂಭುಲಿಂಗೇಶ್ವರ ದೇವಾಲಯದ ಆವರಣ ಸ್ವಚ್ಛಗೊಳಿಸುತ್ತಾ ತನ್ನ ಪರಿಸರವನ್ನೇ ಕಲ್ಯಾಣವಾಗಿಸಿಕೊಂಡಿದ್ದಳು. ಅವಳ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದರು.
ಬಸವರಾಜ ಒಂಟಗೂಡಿ, ಡಾ|| ವಿ.ಡಿ. ಐಹೊಳ್ಳಿ ದಂಪತಿಗಳು, ವಿದ್ಯಾವತಿ ಅಂಕಲಗಿ ದಂಪತಿಗಳು, ಎಸ್.ವಾಯ್. ಗದಗ, ಶಿವಪುತ್ರ ಪೋಳ, ಎಮ್.ಜಿ. ಯಾದವಾಡ, ಎಮ್.ಎಮ್. ಅವರಾದಿ, ಶರಣಗೌಡ ಪಾಟೀಲ, ವಿಠ್ಠಲ ತೇಲಿ, ಮಹಾದೇವ ಹಾಲಳ್ಳಿ, ಸುವರ್ಣಾ ಕುರ್ಲೆ, ಪರಶುರಾಮ ಪೋಳ ಇದ್ದರು.
ಕಾರ್ಯಕ್ರಮವನ್ನು ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಶಿವಾನುಭವ ಗೋಷ್ಠಿಯಲ್ಲಿ ಶರಣ ಶರಣೇಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.