ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಕ್ರಮ ಕೆಳದಿ ಅರಸರ ಕಾಲದ ಶಾಸನ ರಕ್ಷಣೆ
ಕಲಬುರಗಿ:ಮೇ.22:ಉತ್ತರ ಪ್ರದೇಶದ ವಾರಾಣಸಿ ಹತ್ತಿರದಲ್ಲಿ ನಿರ್ಲಕ್ಷ್ಯಕ್ಕೊಳಾಗಿದ್ದ ಕೆಳದಿ ಅರಸರ ಕಾಲದ ಕನ್ನಡ ಶಾಸನದ ರಕ್ಷಣೆಗೆ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸೂಕ್ತ ಕ್ರಮ ಕೈಕೊಂಡಿರುವುದು ಸಂಶೋಧನಾ ಸಾಹಿತ್ಯಾಸಕ್ತರಲ್ಲಿ ಹರ್ಷವನ್ನುಂಟು ಮಾಡಿದೆ.
ಕಾಶಿ ನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕಪಿಲಧಾರಾ ಎಂಬ ಗ್ರಾಮದಲ್ಲಿ ಕೆಳದಿ ಅರಸರು ಪಂಚಕ್ರೋಶಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಟ್ಟಿಸಿರುವ ಸರೋವರದ ಬಳಿ ಕನ್ನಡದ ಈ ಶಾಸನವಿದ್ದು, ಕೆಳದಿ ರಾಜ ಶಿವಪ್ಪನಾಯಕರು ಸರೋವರ ನಿರ್ಮಿಸಿರುವ ಮಾಹಿತಿ ಶಾಸನದಲ್ಲಿ ಕಂಡು ಬಂದಿದೆ.
ರಕ್ಷಣೆಗೆ ಕ್ರಮ : ಕಪಿಲಧಾರಾ ಗ್ರಾಮದ ಜನತೆ ಈ ಶಾಸನದ ಮಹತ್ವ ಅರಿಯದೇ ಸರೋವರದ ದಡದಲ್ಲಿ ಸಂಪರ್ಕ ಸೇತುವೆಯಂತೆ, ಜೊತೆಗೆ ಬಟ್ಟೆ ತೊಳೆಯಲು ಶಾಸನವಿರುವ ಈ ಶಿಲೆಯನ್ನು ಬಳಸುತ್ತಿರುವದು ಗಮನಕ್ಕೆ ಬಂದ ತಕ್ಷಣ ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶಾಸನದ ರಕ್ಷಣೆಗೆ ಸೂಕ್ತ ಕ್ರಮಕೈಕೊಂಡಿದ್ದಾರೆ. ಕಾಶಿ ಪೀಠದ ವ್ಯವಸ್ಥಾಪಕ ಶಿವಾನಂದ ಹಿರೇಮಠ ಹಾಗೂ ಹಿರಿಯ ವಕೀಲ ಉದಯಭಾನು ಸಿಂಹ ಅವರನ್ನು ಸ್ಥಳಕ್ಕೆ ಕಳುಹಿಸಿ ಶಾಸನವನ್ನು ಅವಲೋಕಿಸಿ ಅದರ ಛಾಯಾಚಿತ್ರ ತೆಗೆಯಲು ಸೂಚಿಸಿದ್ದಾರೆ. ಜೊತೆಗೆ ಈ ಸರೋವರ ಇರುವ ಜಾಗವು ಕಪಿಲಧಾರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದ್ದು, ಪಂಚಾಯತಿ ಅಧಿಕಾರಿಗಳನ್ನು ಸಂಪರ್ಕಿಸಿ ಶಾಸನವನ್ನು ರಕ್ಷಣಾತ್ಮಕವಾಗಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ತಿಳಿಸಿದ್ದು, ಶಾಸನವನ್ನು ಪ್ರವಾಸಿಗರಿಗೆ ಪ್ರದರ್ಶನಕ್ಕಿಡಲು ಮೂಲತಃ ಅಪ್ಪಟ ಕನ್ನಡಿಗರೇ ಆಗಿರುವ ಕಾಶೀ ಜಗದ್ಗುರುಗಳು ಯೋಜಿಸಿದ್ದಾರೆ.