ನೌಕರಿ, ಕಾಮಗಾರಿ ಹೆಸರಿನಲ್ಲಿ ಕೋಟ್ಯಾಂತರ ರೂ.ಗಳ ವಂಚನೆ: ಡಾ. ಅಜಯಸಿಂಗ್ ಮಾಜಿ ಆಪ್ತ ಸಹಾಯಕ ಪರಶುರಾಮ್ ಬಂಧನ
ಕಲಬುರಗಿ:ಮೇ.22:ಜೇವರ್ಗಿ ಕ್ಷೇತ್ರದ ಶಾಸಕರೂ,ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರ ಮಾಜಿ ಆಪ್ತ ಸಹಾಯಕ ಸಾರ್ವಜನಿಕರಿಗೆ, ಅದರಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ನೌಕರಿ ಹಾಗೂ ಕಾಮಗಾರಿಗಳನ್ನು ಕೊಡಿಸುವ ನೆಪದಲ್ಲಿ ಕೋಟ್ಯಾಂತರ ರೂ.ಗಳ ವಂಚನೆ ಮಾಡಿದ ಆರೋಪದ ಮೇಲೆ ಪೋಲಿಸರು ಆತನಿಗೆ ತಮ್ಮ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಮಾಜಿ ಆಪ್ತ ಸಹಾಯಕ ಪರಶುರಾಮ್ ತಂದೆ ಗೌಡಪ್ಪಗೌಡನು ಕಳೆದ 2020ರಿಂದ 2024ರ ಅವಧಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೊಡಿಸುವುದಾಗಿ ಹಾಗೂ ಸರ್ಕಾರಿ ನೌಕರಿ ಕೊಡಿಸುವುದಾಗಿ ಸುಮಾರು 30 ಕಾಂಗ್ರೆಸ್ ಕಾರ್ಯಕರ್ತರಿಗೆ ಕಲಬುರ್ಗಿ, ಜೇವರ್ಗಿ, ಯಡ್ರಾಮಿ, ಸುರಪುರ, ಬೀದರ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಣ ತೆಗೆದುಕೊಂಡು ತಲೆ ಮರೆಸಿಕೊಂಡಿದ್ದಾನೆ. ಕೆಲವು ಜನರಿಗೆ ಚೆಕ್ಕುಗಳನ್ನು ಕೊಟ್ಟಿದ್ದು ಎರಡ್ಮೂರು ಚೆಕ್‍ಗಳು ಬೌನ್ಸ್ ಆಗಿವೆ. ಆದ್ದರಿಂದ ವಂಚನೆಗೊಳಗಾದವರಿಗೆ ಅವರ ಹಣ ವಸೂಲಿ ಮಾಡಿಕೊಡಬೇಕು ಎಂದು ನೊಂದವರು ಪೋಲಿಸ್ ಠಾಣೆಯ ಆರಕ್ಷಕ ಉಪ ನಿರೀಕ್ಷರಿಗೆ ಲಿಖಿತ ದೂರು ಸಲ್ಲಿಸಿದ್ದು, ಈ ಕುರಿತು ಆರೋಪಿಯನ್ನು ಪೋಲಿಸರು ಬೆಂಗಳೂರಿನಿಂದ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಭಾವಿ ವ್ಯಕ್ತಿಗಳೂ ಸಹ ಮಾಜಿ ಆಪ್ತ ಸಹಾಯಕನ ವಂಚನೆಗೆ ಒಳಗಾಗಿದ್ದಾರೆ. ಎಎಸ್‍ಐ ಸೇರಿದಂತೆ ಕೇಂದ್ರ ಸಚಿವರೊಬ್ಬರ ಸಂಬಂಧಿ ಸಹ ಹಣ ಕಳೆದುಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳು, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರೂ ಆದ ಬೀದರ್ ಸಂಸದ ಭಗವಂತ್ ಖೂಬಾ ಅವರ ಅಳಿಯ ಬಾಪುರಾವ್ ತಂದೆ ಮಾಣಿಕ್ ಅವರೂ ಸಹ ಮಾಜಿ ಆಪ್ತ ಸಹಾಯಕ ಪರಶುರಾಮ್‍ನಿಗೆ ಹದಿನೈದು ಲಕ್ಷಕ್ಕಿಂತ ಅಧಿಕ ಹಣ ಕೊಟ್ಟಿದ್ದಾರೆ. ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾನೆ ಎಂದು ಬಾಪುರಾವ್ ಅವರು ಹಣ ಕೊಟ್ಟ ಕುರಿತು ಚೆಕ್‍ಗಳ ಸಮೇತ ಪೋಲಿಸರಿಗೆ ಮೊದಲ ದೂರು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಬಾಪುರಾವ್ ಅವರು ಕಲಬುರ್ಗಿಯಲ್ಲಿಯೇ ವಾಸವಾಗಿದ್ದು, ಪರಶುರಾಮ್‍ನ ವಂಚನೆಯನ್ನು ಬಯಲಿಗೆಳೆದ ಮೊದಲಿಗರು ಎನ್ನಲಾಗಿದೆ.
ಪರಶುರಾಮ್‍ನ ವಂಚನೆಯ ಜಾಲದಲ್ಲಿ ಎಎಸ್‍ಐ ರಮೇಶ್ ನಾರಾಯಣಪುರ ಅವರು 8.50 ಲಕ್ಷ ರೂ.ಗಳು, ಶಿವುಕುಮಾರ್ ಕಾಸರಭೋಸಗಾ ಅವರು 10 ಲಕ್ಷ ರೂ.ಗಳು, ಲಿಂಗರಾಜ್ ಆಂದೋಲಾ ಅವರು 3.25 ಲಕ್ಷ ರೂ.ಗಳು, ಗೌಡಪ್ಪಗೌಡ ಕಲಶೆಟ್ಟಿ ಅವರು ಐದು ಲಕ್ಷ ರೂ.ಗಳು, ಮಾನಯ್ಯ ಹಣಮಯ್ಯ ಯಾಳವಾರ್ ಅವರು ಹತ್ತು ಲಕ್ಷ ರೂ.ಗಳು, ರಾಜಾರಾಮಪ್ಪ ನಾಯಕ್ ಸುರಪುರ ಅವರು 25 ಲಕ್ಷ ರೂ.ಗಳು, ಮಲ್ಲಣ್ಣ ಬಸಣ್ಣ ಲಖ್ಖಣ್ಣಿ ಆಂದೋಲಾ ಅವರು 4.50 ಲಕ್ಷ ರೂ.ಗಳು, ನಾಸೀರ್ ಹುಸೇನ್ ಕೊಂಡಾಳ್ ಸುರಪುರ ಅವರು ಹನ್ನೊಂದು ಲಕ್ಷ ರೂ.ಗಳು, ಇಬ್ರಾಹಿಂ ಶಿರವಾಳ್ ಅವರು 35 ಲಕ್ಷ ರೂ.ಗಳು, ಭೀಮಣ್ಣ ಭಜಂತ್ರಿ ಅವರು 1.50 ಕ್ಷ ರೂ.ಗಳು, ಯಲ್ಲಾಲಿಂಗ್ ಅವರಾದ್ ಅವರು 4.50 ಲಕ್ಷ ರೂ.ಗಳು, ಕಮರಸಾಬ್ ಅವರು ಹತ್ತು ಲಕ್ಷ ರೂ.ಗಳು, ದೌಲತರಾಯ್ ಸುಭಾಷ್ ಅವರು ಮೂರು ಲಕ್ಷ ರೂ.ಗಳು ವಂಚನೆಗೆ ಒಳಗಾದ ಕುರಿತು ದೂರು ಸಲ್ಲಿಸಿದ್ದಾರೆ.
ಅದೇ ರೀತಿ ಈರಣ್ಣ ಇಜೇರಿ ಅವರು ಮೂರು ಲಕ್ಷ ರೂ.ಗಳು, ಲಖಣಾಪುರದ ನಾನಾಗೌಡ ಚನ್ನೂರ್ ಅವರು 14 ಲಕ್ಷ ರೂ.ಗಳು, ಬಸಣ್ಣಗೌಡ ಮಲ್ಲಾ(ಕೆ) ಅವರು 8 ಲಕ್ಷ ರೂ.ಗಳು, ನಾರಾಯಣಪುರದ ಭಾಗಣ್ಣ ಕುಂಬಾರ್ ಅವರು 3.50 ಲಕ್ಷ ರೂ.ಗಳು, ಕಲಬುರ್ಗಿಯ ಮಾಣಿಕಪ್ಪ ಬೀದರ್ ಅವರು ಹದಿನೈದು ಲಕ್ಷ ರೂ.ಗಳು, ಶಂಕ್ರೆಪ್ಪ ಮ್ಯಾಗೇರಿ ಅವರು 6.80 ಲಕ್ಷ ರೂ.ಗಳು, ರೂಪಾ ವಾಮದೇವ್ ಅವರು 2.80 ಲಕ್ಷ ರೂ.ಗಳು, ಈರಣ್ಣ ಸಾಥಖೇಡ್ ಅವರು 3.50 ಲಕ್ಷ ರೂ.ಗಳು, ಶಾಬುದ್ದೀನ್ ಕುಕನೂರ್ ಅವರು ಏಳು ಲಕ್ಷ ರೂ.ಗಳು, ಸಾಯೇಬಗೌಡ ದೊಡ್ಡಪ್ಪ ತೆಗ್ಗಳ್ಳಿ ಅವರು 9 ಲಕ್ಷ ರೂ.ಗಳು, ಯಯ್ಯಾಳಪ್ಪ ಗಂಗಾಕರ್ ಯಡ್ರಾಮಿ ಅವರು ನಾಲ್ಕು ಲಕ್ಷ ರೂ.ಗಳು, ಮಲ್ಲಿಕಾರ್ಜುನ್ ಪೂಜಾರಿ ಚನ್ನೂರ್ ಅವರು 50,000ರೂ.ಗಳು, ಮಲ್ಲಣ್ಣ ಹುರಸಗುಂಡಗಿ ಅವರು ಐದು ಲಕ್ಷ ರೂ.ಗಳು, ಲಕ್ಷ್ಮಣಗೌಡ ಬಿರಾದಾರ್ ಅವರು ಮೂರು ಲಕ್ಷ ರೂ.ಗಳು, ಸಂತೋಷ್ ಭಜಂತ್ರಿ ಅವರು ಒಂದು ಲಕ್ಷ ರೂ.ಗಳು, ಸಿದ್ದಣ್ಣಗೌಡ ಸುರಪುರ ಅವರು 2.50 ಲಕ್ಷ ರೂ.ಗಳು, ಲಕ್ಕಪ್ಪ ಕೊಟನೂರ್ ಅವರು ನಾಲ್ಕು ಲಕ್ಷ ರೂ.ಗಳು ವಂಚನೆಗೆ ಒಳಗಾದ ಕುರಿತು ಪೋಲಿಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಮಾಜಿ ಆಪ್ತ ಸಹಾಯಕನ ವಂಚನೆ ಇಷ್ಟಕ್ಕೆ ಮುಗಿದಿಲ್ಲ. ಬೇರೆ, ಬೇರೆ ಕಾರಣಗಳಿಗಾಗಿಯೂ ಲಕ್ಷಾಂತರ ರೂ.ಗಳನ್ನು ವಂಚಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯ ಸಂಬಂಧ ಕಳೆದ 2019ರಲ್ಲಿಯೇ ಮೂವರಿಂದ ತಲಾ ನಾಲ್ಕು ಲಕ್ಷ ರೂ.ಗಳನ್ನು ಹಾಗೂ ಪೋಲಿಸ್ ಪೇದೆ ನೇಮಕಾತಿಗಾಗಿ ಎರಡು ಲಕ್ಷ ರೂ.ಗಳನ್ನು, ಪೀಠೋಪಕರಣಗಳು ಹಾಗೂ ಪ್ರಥಮ ದರ್ಜೆ ಗುಮಾಸ್ತ ಹುದ್ದೆ ನೇಮಕಾತಿ ಹೆಸರಿನಲ್ಲಿ 19 ಲಕ್ಷ ರೂ.ಗಳನ್ನು, ಸೊಲ್ಲಾಪುರದವರಿಂದ ಪ್ರಥಮ ದರ್ಜೆ ಗುಮಾಸ್ತರ ಹುದ್ದೆ ನೇಮಕಾತಿಗಾಗಿ ಮೂರು ಲಕ್ಷ ರೂ.ಗಳನ್ನು, ಸುರುಪುರ ವ್ಯಕ್ತಿಯಿಂದ ಗುಮಾಸ್ತ್ ಹುದ್ದೆಗಾಗಿ 12 ಲಕ್ಷ ರೂ.ಗಳನ್ನು, ಅದೇ ರೀತಿಯ ಕಲಬುರ್ಗಿಯ ವ್ಯಕ್ತಿಯಿಂದ ಗುಮಾಸ್ತ ಹುದ್ದೆಗಾಗಿ ಹತ್ತು ಲಕ್ಷ ರೂ.ಗಳನ್ನು, ಅಫಜಲಪುರ ತಾಲ್ಲೂಕಿನ ಮಂಗಳೂರು ವ್ಯಕ್ತಿಯಿಂದ ಗುಮಾಸ್ತರ ಹುದ್ದೆಗಾಗಿ, ಪೋಲಿಸ್ ಪೇದೆ ನೇಮಕಾತಿಗಾಗಿ 12 ಲಕ್ಷ, 58 ಲಕ್ಷ, ಎರಡು ಲಕ್ಷ, 56 ಲಕ್ಷ, 12 ಲಕ್ಷ, 44 ಲಕ್ಷ, ಸುರಪುರದ ವ್ಯಕ್ತಿಯಿಂದ ಆರು ಲಕ್ಷ ರೂ.ಗಳು ಸೇರಿದಂತೆ ಹಲವರಿಗೆ ವಂಚಿಸಿದ ಆರೋಪಗಳನ್ನು ಎದುರಿಸುತ್ತಿದ್ದಾನೆ.
ಕೆಲಸದಿಂದ ವಜಾ: ಕಳೆದ ಒಂದು ವರ್ಷದ ಹಿಂದೆಯೇ ಪರಶುರಾಮ್ ತಂದೆ ಗೌಡಪ್ಪಗೌಡ ಹಲವರಿಗೆ ಉದ್ಯೋಗ ಹಾಗೂ ಕೆಲಸದ ಆಮಿಷ ಒಡ್ಡಿ ಲಕ್ಷಾಂತರ ರೂ.ಗಳನ್ನು ವಂಚಿಸಿದ ಆರೋಪದ ಕುರಿತು ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರ ಗಮನಕ್ಕೆ ಬಂದಾಗ ಆತನಿಗೆ ವಿಚಾರಣೆಗೆ ಒಳಪಡಿಸಿ ತಕ್ಷಣವೇ ಆಪ್ತ ಸಹಾಯಕ ಹುದ್ದೆಯಿಂದ ತೆಗೆದುಹಾಕಿದ್ದರು ಎಂದು ತಿಳಿದುಬಂದಿದೆ. ಡಾ. ಅಜಯಸಿಂಗ್ ಅವರ ಬಳಿ ಸುಮಾರು ಹತ್ತು ಜನ ಆಪ್ತ ಸಹಾಯಕರು ಇದ್ದು, ಪರಶುರಾಮ್ ವಜಾದಿಂದಾಗಿ ಕಳೆದ ಒಂದು ವರ್ಷದಿಂದ ಒಂಭತ್ತು ಜನ ಆಪ್ತ ಸಹಾಯಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ತೀವ್ರ ವಿಚಾರಣೆ: ಲಿಖಿತ ದೂರು ಪಡೆದ ಪೋಲಿಸರು ಮೊನ್ನೆ ಬೆಳಗಿನ ಜಾವ ಆರೋಪಿ ಪರಶುರಾಮ್‍ನಿಗೆ ಬೆಂಗಳೂರಿನಿಂದ ಕರೆತಂದು ಡಿಎಸ್‍ಪಿ ಬಿಂದು ಅವರ ನೇತೃತ್ವದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿ ಪರಶುರಾಮ್ ಕಲಬುರ್ಗಿ ನಗರದಲ್ಲಿ ಎರಡು ಮನೆಗಳನ್ನು, ಜೇವರ್ಗಿಯಲ್ಲಿ ಎರಡು ಮನೆಗಳನ್ನು ಹೊಂದಿದ್ದು, ಅವುಗಳನ್ನು ಸಂಬಂಧಿಕರ ಹೆಸರಿಗೆ ಮಾಡಿದ್ದಾನೆ ಎನ್ನಲಾಗಿದೆ. ಜೊತೆಗೆ ಪರಶುರಾಮ್ ತಾಲ್ಲೂಕಿನ ನೆಲೋಗಿ ಮತ್ತು ಜೇರಟಗಿ ಗ್ರಾಮದಲ್ಲಿ ಎಂಎಸ್‍ಐಎಲ್ ಶಾಪ್‍ಗಳನ್ನೂ ಸಹ ಹೊಂದಿರುವುದು ತಿಳಿದುಬಂದಿದೆ.