ಸರ್ಕಾರಿ ಗೌರವದೊಂದಿಗೆ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಅಂತ್ಯಕ್ರಿಯೆ: ಖರ್ಗೆ ಸೇರಿ ಗಣ್ಯರು ಭಾಗಿ
ಕಲಬುರಗಿ:ಮೇ.22: ಮಂಗಳವಾರ ತಡರಾತ್ರಿ ನಿಧನರಾಗಿದ್ದ ಮಾಜಿ ಸಂಸದ ಡಾ. ಇಕ್ಬಾಲ್ ಅಹ್ಮದ್ ಸರಡಗಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಸರ್ಕಾರಿ ಗೌರವದೊಂದಿಗೆ ಬುಧವಾರ ಸಂಜೆ ನಗರದ ಹಫ್ತಗುಂಬಜ್ ಪ್ರದೇಶದ ನ್ಯಾಷನಲ್ ಕಾಲೇಜು ಮಸೀದಿಯಲ್ಲಿ (ನಮಾಜ್ ಎ ಜನಾಜಾ) ಹತ್ತಿರದ ಮಕಬರಾ ಖಬರಿಸ್ತಾನ್‍ನಲ್ಲಿ ನೆರವೇರಿತು.
ದೆಹಲಿಯಿಂದ ವಿಮಾನದ ಮೂಲಕ ದೌಡಾಯಿಸಿದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್, ಶಾಸಕರಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್, ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್, ಅಬ್ದುಲ್ ಹಮೀದ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಭೀಮಣ್ಣ ಸಾಲಿ ಅವರೂ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಖಾಸಗಿ ಆಸ್ಪತ್ರೆಯಲ್ಲಿ ನಿಧನ: ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷ ಹಾಗೂ ಇಂಡಿಯಾ ಒಕ್ಕೂಟದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಪರಮಾಪ್ತ ಇಕ್ಬಾಲ್ ಅಹ್ಮದ್ ಸರಡಗಿ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮಂಗಳವಾರ ತಡರಾತ್ರಿ ವಯೋ ಸಹಜ ಕಾಯಿಲೆಯಿಂದ ಅಸುನೀಗಿದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಪುತ್ರ ಇರ್ಫಾನ್ ಅಹ್ಮದ್ ಸರಡಗಿ, ಪುತ್ರಿ ಡಾ. ಜಹೇರಾ ಸರಡಗಿ ಅವರೂ ಸೇರಿದಂತೆ ಅಪಾರ ಬಂಧು, ಬಳಗ, ಅಭಿಮಾನಿ ಕಾರ್ಯಕರ್ತರವನ್ನು ಬಿಟ್ಟು ಅಗಲಿದ್ದಾರೆ. ಸರಡಗಿ ಅವರು ಮೃತರಾದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯದ ಗ್ರಾಮೀಣಾಭಿವೃದ್ಧಿ, ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಮಕಬೂಲ್ ಪಟೇಲ್ ಸೇರಿದಂತೆ ಹಲವಾರು ಗಣ್ಯರು ಐವಾನ್ ಶಾಹಿ ಪ್ರದೇಶದಲ್ಲಿರುವ ಸರಡಗಿ ಅವರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಅಂತಿಮ ದರ್ಶನ ಪಡೆದುಕೊಂಡರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ದರ್ಗಾ ಪ್ರದೇಶದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸರಡಗಿಯವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯಮಂತ್ರಿಗಳ ಸಂತಾಪ: ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸರಡಗಿ ಅವರು ಎರಡು ಬಾರಿ ಸಂಸದರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಅವರು ಸ್ನೇಹಜೀವಿ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಅವರಲ್ಲಿದ್ದ ಜನಪರ ಕಾಳಜಿ ಅನುಕರಣೀಯ ಎಂದು ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸರಡಗಿ ಅವರ ನಿಧನದಿಂದ ಕಾಂಗ್ರೆಸ್ಸಿನ ನಿಷ್ಠಾವಂತ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಡಾ. ಉಮೇಶ್ ಜಾಧವ್ ಮುಂತಾದವರೂ ಸಹ ಸರಡಗಿ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
ಪರಿಚಯ: ಮಾಜಿ ಸಂಸದ ಇಕಬಾಲ್ ಅಹ್ಮದ್ ಸರಡಗಿ ಅವರು ಎರಡು ಬಾರಿ ಸಂಸದರಾಗಿ, ಒಮ್ಮೆ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಹೈದ್ರಾಬಾದ್ ರಾಜ್ಯಕ್ಕೆ ಸೇರಿದ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ಮೊಹ್ಮದ್ ಅಹ್ಮದ್ ಸರಡಗಿ ಮತ್ತು ಗೌಹಾರ್ ಬೇಗಂ ದಂಪತಿಗಳ ಉದರದಲ್ಲಿ 1944ರ ಜೂನ್ 5ರಂದು ಜನಿಸಿದ್ದರು. ಮೈಸೂರು ರಾಜ್ಯ ಉದಯವಾದಾಗ ಕಲಬುರ್ಗಿಯಲ್ಲಿ ಅವರು ಬಿಎ ಪದವಿಯನ್ನು ಸರ್ಕಾರಿ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ಪೂರೈಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಲ್‍ಎಲ್‍ಬಿ ಪದವಿ ಪೂರೈಸಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. ಅಷ್ಟೇ ಅಲ್ಲದೇ ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ತಮ್ಮ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಲು ಆರಂಭಿಸಿದರು.
ಇಕಬಾಲ್ ಅಹ್ಮದ್ ಸರಡಗಿ ಅವರು 13 ಮತ್ತು 14ನೇ ಲೋಕಸಭೆಯನ್ನು ಪ್ರವೇಶಿಸುವ ಮೂಲಕ ಎರಡು ಬಾರಿ ಸಂಸದರಾಗಿ ಜನಪ್ರೀಯತೆಯನ್ನು ಹೊಂದಿದ್ದರು. ಜೊತೆಗೆ ಕಲಬುರ್ಗಿಯಲ್ಲಿಯೇ ಅಲ್ ಬದರ್ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮತ್ತು ಅಲ್ ಬದರ್ ರೂರಲ್ ಡೆಂಟಲ್ ಕಾಲೇಜು ಸ್ಥಾಪಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಅದರಲ್ಲಿಯೂ ವೈದ್ಯಕೀಯ ಶಿಕ್ಷಣಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿದರು.
2009ರಲ್ಲಿ ಲೋಕಸಭಾ ಕ್ಷೇತ್ರಗಳು ಮರುವಿಂಗಡಣೆಯಾದ ಸಂದರ್ಭದಲ್ಲಿ ಕಲಬುರ್ಗಿ ಮೀಸಲು ಕ್ಷೇತ್ರವಾಗಿ ಘೋಷಿಸಲ್ಪಟ್ಟಿತು. ಹೀಗಾಗಿ ಆ ಮೀಸಲು ಕ್ಷೇತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಸ್ಪರ್ಧಿಸಿ ಆಯ್ಕೆಯಾದರು. ಇಕಬಾಲ್ ಅಹ್ಮದ್ ಸರಡಗಿ ಅವರು 1978ರಿಂದ 1979ರವರೆಗೆ ಕಲಬುರ್ಗಿ ನಗರ ಸುಧಾರಣಾ ಮಂಡಳಿಯ ಅಧ್ಯಕ್ಷರಾಗಿ, 1992ರಿಂದ 1995ರವರೆಗೆ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಲೋಕಸಭಾ ಸದಸ್ಯರಾಗಿ, ಕೇಂದ್ರ ಗೃಹ ವ್ಯವಹಾರಗಳ ಸಮಿತಿಯ ಸದಸ್ಯರಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸದಸ್ಯರಾಗಿ, ವಕ್ಫ್ ಜಂಟಿ ಸದನ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಎರಡನೇ ಬಾರಿ ಲೋಕಸಭಾ ಸದಸ್ಯರಾಗಿದ್ದಾಗ ಕೇಂದ್ರ ಅಂದಾಜು ಸಮಿತಿಯ ಸದಸ್ಯರಾಗಿ, ಅಖಿಲ ಭಾರತ ಹಜ್ ಸಮಿತಿಯ ಸದಸ್ಯರಾಗಿ, ಪ್ರಿವಿಲೇಜ್ ಮತ್ತು ರೈಲ್ವೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಪರಾಭವ: ಕಳೆದ 2012ರ ಮೊದಲ ಅವಧಿಯಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಜರುಗಿದ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕಬಾಲ್ ಅಹ್ಮದ್ ಸರಡಗಿ ಅವರು ಪರಾಭವಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿತ್ತು. ಇದರಿಂದಾಗಿ ಕಾಂಗ್ರೆಸ್ ವರಿಷ್ಠರು ಮುಸ್ಲಿಂ ಸಮುದಾಯದವರಿಗೆ ಕ್ಷಮೆ ಕೇಳಿದ್ದರು. ನಂತರದ ಬೆಳವಣಿಗೆಯಲ್ಲಿ ಇಕಬಾಲ್ ಅಹ್ಮದ್ ಸರಡಗಿ ಅವರಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿಸುವ ಮೂಲಕ ಅವರಿಗೆ ಪಕ್ಷವು ಆಗಿರುವ ತಪ್ಪು ಸರಿಪಡಿಸಿಕೊಂಡಿತ್ತು. ಇಕಬಾಲ್ ಅಹ್ಮದ್ ಸರಡಗಿ ಅವರ ಪರಾಭವಕ್ಕೆ ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಶಾಸಕರಿಬ್ಬರು ಮಾಡಿದ ವಿರೋಧವೇ ಕಾರಣ ಎಂಬ ಟೀಕೆಯೂ ಆ ವೇಳೆ ವ್ಯಕ್ತವಾಗಿತ್ತು.
ಸಂಸತ್ತಿನ ಮೇಲೆ ದಾಳಿ: ಡಾ. ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಲೋಕಸಭೆಯ ಮೇಲೆ ಉಗ್ರರು ದಾಳಿ ಮಾಡಿದ ಸಂದರ್ಭದಲ್ಲಿ ಸದನದಲ್ಲಿದ್ದ ಇಕಬಾಲ್ ಅಹ್ಮದ್ ಸರಡಗಿ ಅವರು ಭಯದಿಂದ ಹೊರಗೋಡಿ ಬಂದು ಎಲ್ಲ ಮಾಹಿತಿಯನ್ನು ದೂರವಾಣಿಯ ಮೂಲಕ ವಿವರಿಸಿದ್ದರು. ಅಲ್ಲದೇ ಸಂಸತ್ತಿನಲ್ಲಿ ಬಸವಣ್ಣನವರ ಕಳಬೇಡ, ಕೊಲಬೇಡ ಎಂಬ ವಚನವನ್ನು ಅತ್ಯಂತ ಸುಶ್ರಾವ್ಯವಾಗಿ ಹೇಳುವ ಮೂಲಕ ಇಕ್ಬಾಲ್ ಅಹ್ಮದ್ ಸರಡಗಿ ಅವರು ಗಮನಸೆಳೆದಿದ್ದರು.