ಹುಸಿ ಭರವಸೆ, ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಿಂದ ಆರ್ಥಿಕ ದಿವಾಳಿ: ಶ್ವೇತಪತ್ರಕ್ಕೆ ನಮೋಶಿ ಆಗ್ರಹ
ಕಲಬುರಗಿ:ಮೇ.22:ಚುನಾವಣೆಯಲ್ಲಿ ಏನೆಲ್ಲ ಸುಳ್ಳು ಭರವಸೆಗಳನ್ನು ನೀಡಿ, ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಸಂಪೂರ್ಣ ಆರ್ಥಿಕ ದಿವಾಳಿಯನ್ನು ಹೊಂದಿದ್ದು, ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದಂತೆ ಮಾಡಿದೆ. ಕೂಡಲೇ ಮುಖ್ಯಮಂತ್ರಿಗಳು ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಅಧಿಕಾರ ಹಿಡಿದು ಒಂದ ವರ್ಷವಾಗಿದ್ದು, ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳು ಯಾವುದೇ ಅನುದಾನವಿಲ್ಲದೆ ಕೇವಲ ಬಾಗ್ಯಗಳನ್ನು ನೀಡಿದ್ದೇವೆ ಎಂದು ಸುಳ್ಳುಗಳನ್ನು ಹೇಳಿಕೊಂಡು ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ಳುತಿದ್ದಾರೆ ಎಂದು ದೂರಿದರು.
ಶಿಕ್ಷಣದಿಂದ ಹಿಡಿದು ಗ್ರಾಮೀಣಾಭಿವೃದ್ಧಿ, ಕೃಷಿ, ಕೈಗಾರಿಕೆ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಪ್ರವಾಸೋದ್ಯಮ ಇಲಾಖೆಗಳು ಹಾಗೂ ಎಲ್ಲ ನಿಗಮ ಮಂಡಳಿಗಳು ಅನುದಾನವಿಲ್ಲದೆ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯದೆ ಕೇವಲ ಅಧಿಕಾರಿಗಳಿಗೆ ವೇತನ ನೀಡಲು ಮಾತ್ರ ಇರುವ ಇಲಾಖೆಯಾಗಿ ಕಾಣುತ್ತಿದೆ ಎಂದು ಅವರು ಟೀಕಿಸಿದರು.
ದೇಶಕ್ಕೆ ಮಾದರಿ ಶಿಕ್ಷಣ ವ್ಯವಸ್ತೆ ಎನಿಸಿಕೊಂಡಿದ್ದ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಂದು ದೇಶದ ಇತರ ರಾಜ್ಯಕ್ಕೆ ಈ ಇಲಾಖೆಯು ಒಂದು ಕೆಟ್ಟ ಉದಾಹರಣೆಯಾಗಿ ಮಾರ್ಪಟಾಗಿದೆ. ಇತಿಹಾಸದಲ್ಲೇ ಮೊದಲಬಾರಿಗೆ ಶಿಕ್ಷಣ ತಜ್ಞರು ತಯಾರಿಸಿದ ನುರಿತ ಅಧಿಕಾರಿಗಳು ತಯಾರಿಸಿದ ಪಠ್ಯವನ್ನು (ಸ್ವಾತಂತ್ರ ನಂತರ ಇಲ್ಲಿಯ ವರೆಗೆ ಶಿಕ್ಷಣ ತಜ್ಞರಿಗೆ ಸೀಮಿತವಾಗಿತ್ತು) ಯಾವುದೇ ಸಂಬಂದಿತ ಕೌಶಲ್ಯವಿಲ್ಲದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟದಲ್ಲಿ ಯಾವ ಪಠ್ಯ ಸೇರಬೇಕು, ಸೇರಬಾರದು ಎಂದು ನಿರ್ದರಿಸಿ ಕನ್ನಡ ಮತ್ತು ಸಮಾಜ-ವಿಜ್ಞಾನದ 10 ಪಠ್ಯಗಳನ್ನು ಕಿತ್ತೆಸೆಯುತ್ತೇವೆ ಎನ್ನುವ ಮೂಲಕ ರಾಜಕೀಯಗೊಳಿಸಿದೆ ಎಂದು ಅವರು ಕಿಡಿಕಾರಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಡೆಹಿಡಿದು ದಿನಕ್ಕೊಂದು ಗೊಂದಲದ ಆದೇಶ ಮಾಡಿ ಶಿಕ್ಷಕರ, ಪಾಲಕರ ದಿಕ್ಕು ತಪ್ಪಿಸುತ್ತಾ ರಾಜ್ಯದಲ್ಲಿ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ ಎಂದು ಘೋಷಿಸಿ ಇಲ್ಲಿಯವರೆಗೆ ಯಾವದೇ ಸ್ಪಷ್ಟ ಆದೇಶವಿಲ್ಲದೆ ಶಿಕ್ಷಣ ಇಲಾಖೆ ನಡೆಯುತ್ತಿದೆ. ಈ ನಡುವೆ ಇದೇ ರಾಜ್ಯದಲ್ಲಿ ಇತರ ಖಾಸಗಿ ಶಾಲೆಗಳಲ್ಲಿ ಸಿಬಿಎಸ್‍ಇ ಮೂಲಕ ಹೊಸ ನೀತಿಯನ್ನು ಅಳವಡಿಸಿ ಸರ್ಕಾರಿ ಶಾಲೆಯ ಮಕ್ಕಳಿಗಿಂತ ಉನ್ನತ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದರೆ, ಸರ್ಕಾರಿ ಶಾಲೆಯಲ್ಲಿರುವ ಸುಮಾರು 1 ಕೋಟಿ ಮಕ್ಕಳು ದೇಶದ ಇತರ ರಾಜ್ಯದ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ಪಡೆಯದಂತೆ ಮಾಡಿರುವುದು ಇವರ ಸಾಧನೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಶಿಕ್ಷಕರ ಹಾಗೂ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿರುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಈ ಸರ್ಕಾರ ಇಲ್ಲಿಯವರೆಗೆ ಇದರ ಬಗ್ಗೆ ಪ್ರಸ್ತಾಪವನ್ನೇ ಮರೆತು ಈಗ ನಿಗಧಿತ ಸಮಯಕ್ಕೆ ವೇತನವನ್ನೇ ನೀಡಲು ಪರದಾಡುತ್ತಿದೆ. ಅಷ್ಟೇ ಅಲ್ಲದೆ 7ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸದೆ ಎಲ್ಲಾ ಸರ್ಕಾರಿ ನೌಕರರಿಗೂ ಮೋಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎರಡು ತಿಂಗಳ ವೇತನ ಸಕಾಲಕ್ಕೆ ಬಿಡುಗಡೆ ಮಾಡದೇ ಕೆ-2 ತಂತ್ರಾಂಶದ ಲೋಪದ ನೆಪವೊಡ್ಡಿ ಅವರ ವೇತನ ಬಟವಾಡೆಯಾಗದೆ ಇರುವುದರಿಂದ ರಜೆ ಸಂದರ್ಭದಲ್ಲಿ ಸದರಿ ನೌಕರರು ಕೌಟುಂಬಿಕವಾಗಿ ಸಾಕಷ್ಟ ಸಮಸ್ಯೆಗಳನ್ನು ಅನುಭವಿಸಿದ್ದಲ್ಲದೆ, ರಜೆಯಲ್ಲಿ ಕುಟುಂಬದೊಂದಿಗೆ ನೆಮ್ಮದಿಯಾಗಿ ಇರುವ ವಾತಾವರಣವೂ ಇಲ್ಲದೆ ಅವರು ಸಮಸ್ಯೆಗೊಳಗಾಗಿದ್ದು ಸರ್ಕಾರದ ಗಮನಕ್ಕೆ ತರಲಾಗಿದೆ ಹಾಗೂ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ ಎಂಬ ಭಾವನೆ ಇದ್ದರೂ ಕೇವಲ ಕೆ-2 ತಂತ್ರಾಂಶದ ಲೋಪವನ್ನು ಎರಡು ತಿಂಗಳವರೆಗೆ ಸರಿ ಮಾಡದೆ ಇರುವ ಸ್ಥಿತಿ ಇದೆ. ಇದರಿಂದ ಕೇವಲ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಮಾತ್ರವೇ ಸಮಸ್ಯೆ ಇರಬೇಕೆ ? ಇದು ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ದೂರಿದರು.
ಶಿಕ್ಷಣ ಇಲಾಖೆ ಮಾತ್ರವಲ್ಲದೆ ಇತರ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ನಡೆಯಬೇಕಿದ್ದ ಬಡ್ತಿಗಳನ್ನು ನಡೆಸದಿರುವುದು ನೋಡಿದರೆ ಸರ್ಕಾರದ ಆರ್ಥಿಕ ವ್ಯವಸ್ಥೆಯ ಅದೋಗತಿ ತೋರಿಸುತ್ತಿದೆ. ಬಹು ಮುಖ್ಯವಾಗಿ ಎಲ್ಲ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚಿನ ದಿನಗಳಲ್ಲಿ ಕೆ-ಸೆಟ್ ಪರೀಕ್ಷಗಳನ್ನು ಕಲ್ಯಾಣ ಕರ್ನಾಟಕದ ಕೇಂದ್ರದ ಪರೀಕ್ಷಾರ್ತಿಗಳಿಗೆ ಈ ಭಾಗದಲ್ಲಿ ಪರೀಕ್ಷಾ ಕೇಂದ್ರ ನೀಡದೆ ಅಸ್ಪ್ರುಶ್ಯರಂತೆ ದೂರದ ಬೆಂಗಳೂರಿನ ಕೇಂದ್ರಗಳಿಗೆ ಹೋಗುವಂತೆ ಕೊನೆಯ ಕ್ಷಣಗಳಲ್ಲಿ ಬದಲಾಯಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಅವಮಾನ ಮಾಡಿರುವ ಸರ್ಕಾರ ಅದೇ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಿಇಟಿ ಪರೀಕ್ಷೆಯಲ್ಲಾದ ತಪ್ಪುಗಳನ್ನೂ ಸಮರ್ಥಿಸಿರುವುದು ನೋಡಿದರೆ ಅಧಿಕಾರಿಗಳ ಕೈಗೊಂಬೆಯಾಗಿರುವುದು ಸ್ಪಷ್ಟವಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಲ್ಲಿಯೂ ಸಹ ವಿಫಲವಾಗಿದೆ. ಪಬ್ಲಿಕ್ ಪರೀಕ್ಷೆ ನಡೆಸುವುದಾಗಿ ಹೇಳಿ ಹಲವಾರು ಗೊಂದಲವಾದ ಆದೇಶಗಳನ್ನು ಜಾರಿಗೊಳಿಸಿದ್ದು 5, 8 ಮತ್ತು 9ನೇ ತರಗತಿಗಳಿಗೆ ಸಂಬಂಧಿಸಿದಂತೆ ಬೋರ್ಡ್ ಪರೀಕ್ಷೆಗಳ ಬಗ್ಗೆ, ಪೆÇೀಷಕರು ಜನಪ್ರತಿನಿಧಿಗಳು ಮತ್ತು ಶಿಕ್ಷಣ ಸಂಘಟನೆಗಳ ಪದಾಧಿಕಾರಿಗಳ ವಿರೋಧವಿದ್ದರೂ ಹಠಮಾರಿ ಧೋರಣೆಯನ್ನು ಅನುಸರಿಸಿ ಶಿಕ್ಷಕರ ಮೇಲೆ ಒತ್ತಡ ತರುವುದರ ಮೂಲಕ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಿ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಲು ಅತಿ ಹೆಚ್ಚು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸುವುದರ ಮೂಲಕ ಶಿಕ್ಷಕರ ಮೇಲೆ ಒತ್ತಡ ತಂದಾಗ ನಾವು ತೀವ್ರವಾಗಿ ವಿರೋಧಿಸಿದಾಗ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಅವರು ದೂರಿದರು.
ಶಿಕ್ಷಕರು ರಜಾ ಅವಧಿಯಲ್ಲಿ ಚುನಾವuಗೆ ಸಂಬಂಧಿಸಿದ ಕಾರ್ಯಗಳು, 5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇವೆಲ್ಲವನ್ನೂ ಬಿಡುವಿಲ್ಲದೆ ಮುಗಿಸಿ ಇನ್ನೇನು ಉಳಿದಿರುವ ರಜಾ ದಿನಗಳಲ್ಲಿ ಕುಟುಂಬದವರೊಂದಿಗೆ ಪ್ರವಾಸ ಅಥವಾ ತಮ್ಮ ಸ್ವಂತ ಸ್ಥಳಗಳಿಗೆ ಭೇಟಿ ನೀಡುವ ಯೋಜನೆಯಲ್ಲಿದ್ದಾಗಲೇ ಸರ್ಕಾರವು ವಿಶೇಷ ತರಗತಿಗಳನ್ನು ನಡೆಸುವಂತೆ ಆದೇಶ ನೀಡಿದ್ದು ಮೂರ್ಖತನದ ಪರಮಾವಧಿಯಾಗಿದೆ. ಯಾವುದೇ ಪರೀಕ್ಷೆಗಳಿಗೆ ಇಲ್ಲದೆ ಇರುವ ಸಿಸಿಟಿವಿ ಅಳವಡಿಕೆ ಮತ್ತು ವೆಬ್ ಕಾಸ್ಟಿಂಗ್‍ನ್ನು ತರಾತುರಿಯಲ್ಲಿ ಪೂರ್ವ ತಯಾರಿ ಇಲ್ಲದೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮೇಲೆ ಅಳವಡಿಸಿ ಶಿಕ್ಷಕರನ್ನು ಭಯೋತ್ಪಾದಕರಂತೆ ಬಿಂಬಿಸಿ ಮಕ್ಕಳಲ್ಲಿ ಭಯದ ವಾತಾವರಣ ಮೂಡಿಸಿ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೇ ಅಲ್ಲದೇ ಕಾನೂನು ಸುವ್ಯವಸ್ಥೆಯಲ್ಲಿಯೂ ಹಿಂದುಳಿದಿದ್ದು ಉಡುಪಿಯ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿರುವ ಪ್ರಕರಣ, ಹುಬ್ಬಳ್ಳಿಯ ನೇಹಾ ಪ್ರಕರಣದಂತಹ ನೂರಾರು ಪ್ರಕರಣಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ, ಕಳೆದ ಒಂದು ವರ್ಷದಲ್ಲಿ ಸರ್ಕಾರವು ಶಿಕ್ಷಣ ಇಲಾಖೆಯಲ್ಲಿ ಹಿಂದೆಂದೂ ಕಾಣದ ರಾಜಕೀಯಗೊಳಿಸಿ ಶಿಕ್ಷಕರ, ವಿದ್ಯಾರ್ಥಿಗಳ, ಶಿಕ್ಷಣ ತಜ್ಞರ ವಿಶ್ವಾಸಗಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ದೂರಿದರು.
ಇನ್ನು ಈಶಾನ್ಯ ವಲಯ ಪದವೀಧರ ಮತಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್ ಅವರ ಪರ ಪ್ರಚಾರಕ್ಕಾಗಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಮೇ 23ರಂದು ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಳ್ಳುವರು ಎಂದು ನಮೋಶಿ ಅವರು ಹೇಳಿದರು.