ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿಯವರಿಗೆ ಎಂಎಲ್ಸಿಗೆ ಪ್ರಾತಿನಿಧ್ಯ ನೀಡಿಬಿಜೆಪಿ ವರಿಷ್ಠರಿಗೆ ಗಾಣಿಗ ಸಮಾಜದ ಮುಖಂಡರ ಒತ್ತಾಯ
ವಿಜಯಪುರ,ಮೇ.22: ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಅವಕಾಶ ನೀಡಿ ವಿಧಾನ ಪರಿಷತ್ ಸದಸ್ಯರನ್ನಾಗಿಸಬೇಕು ಎಂದು ಗಾಣಿಗ ಸಮಾಜ ಒತ್ತಾಯಿಸಿದೆ.
ಕೊಲ್ಹಾರ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಗಾಣಿಗ ಸಮಾಜದ ಮುಖಂಡರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಿಗೆ ಆಗ್ರಹಿಸಿದರು.
ಕೊಲ್ಹಾರದ ಶ್ರೀ ಕಲ್ಲಿನಾಥ ಮಹಾಸ್ವಾಮೀಜಿ ಮಾತನಾಡಿ, ಎಸ್.ಕೆ. ಬೆಳ್ಳುಬ್ಬಿ ಗಾಣಿಗ ಸಮಾಜ ಸೇರಿದಂತೆ ಸರ್ವಸಮಾಜಗಳ ಬಗ್ಗೆ ಕಾಳಜಿಯುಳ್ಳ ನಾಯಕರಾಗಿದ್ದಾರೆ, ಹೀಗಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವುದು ಅಗತ್ಯವಾಗಿದೆ, ರಾಜ್ಯದಲ್ಲಿ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಹಿರಿಯ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಸಂತ್ರಸ್ತರು, ರೈತರ ಪರ ಹೋರಾಟಗಳ ಮೂಲಕವೇ ಮಂಡಲ ಪಂಚಾಯಿತಿಯಿಂದ ಸಚಿವ ಸ್ಥಾನದವರೆಗೂ ಪರಿಶ್ರಮದಿಂದ ಬೆಳೆದು ಬಂದು ಇಂದು ಬಿಜೆಪಿ ಪಕ್ಷಕ್ಕೆ ಶಕ್ತಿಯಾಗಿ ನಿಂತಿದ್ದಾರೆ. ಮೂರು ಬಾರಿ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಸಮರ್ಥವಾಗಿ ಪಕ್ಷ ಸಂಘಟನೆ ಮಾಡಿ ಹೆಚ್ಚಿನ ಶಾಸಕ ಸ್ಥಾನಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಸಚಿವರಾಗಿದ್ದ ವೇಳೆ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಹಿರಿಯ ಸಚಿವರೊಂದಿಗೆ ಚರ್ಚಿಸಿ ಮನವೊಲಿಸಿ ವಿಜಯಪುರ ಜಿಲ್ಲೆಗೆ ಉಷ್ಣ ವಿದ್ಯುತ್ ಸ್ಥಾವರ ತರುವಲ್ಲಿ ಯಶಸ್ವಿಯಾಗಿದ್ದಾರೆ, ಅದೇ ತೆರನಾಗಿ ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಗಾಣಿಗ ಸಮಾಜವು ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುತ್ತಲೇ ಬಂದಿದೆ. ಹೀಗಾಗಿ ಸಮಾಜಕ್ಕೂ ಈ ಬಾರಿ ಬಿಜೆಪಿ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಅಭಿವೃದ್ಧಿ ವಿಷಯದಲ್ಲಿ ದೊಡ್ಡ ಕೊಡುಗೆ ನೀಡಿರುವ ಎಸ್.ಕೆ. ಬೆಳ್ಳುಬ್ಬಿ ದಾಖಲೆಯ ಕೊರ್ತಿ-ಕೊಲ್ಹಾರ ಸೇತುವೆ ನಿರ್ಮಾಣ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಸ್ಥಾಪನೆ ಸೇರಿದಂತೆ ಗಮನಾರ್ಹ ಸಾಧನೆ-ಯೋಜನೆ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಒಂದು ಅವಕಾಶ ನೀಡಬೇಕು ಎಂದರು.
ಗಾಣಿಗ ಸಮುದಾಯ ಎಂದಿಗೂ ಬಿಜೆಪಿ ಪರವಾಗಿರುವ ಸಮಾಜ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಣಿಗ ಸಮುದಾಯದ ನಾಯಕರಾದ ಲಕ್ಷ್ಮಣ ಸವದಿಯವರಿಗೆ ಟಿಕೆಟ್ ಕೊಡದಿರುವ ಕಾರಣ ರಾಜ್ಯದಲ್ಲಿ ಗಾಣಿಗ ಸಮುದಾಯದ ಮತಗಳು ವಿಭಜನೆಯಾಗಿವೆ ಎಂದು ಇಂಟಿಲಿಜೆನ್ಸ್ ರಿಪೆÇೀರ್ಟ್ ನೀಡಿತ್ತು ಎಂಬ ವಿಷಯವನ್ನು ಶ್ರೀಗಳು ಉಲ್ಲೇಖಿಸಿದರು.
ಈಗ ಬಿಜೆಪಿಯಲ್ಲಿ ಗಾಣಿಗ ಸಮಾಜದ ಒಬ್ಬ ಜನಪ್ರತಿನಿಧಿಯೂ ಇಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ದೊಡ್ಡ ಸಮುದಾಯವಾದ ಗಾಣಿಗ ಸಮಾಜದ ಸಂಪೂರ್ಣ ಬೆಂಬಲ ಅತ್ಯಗತ್ಯವಾಗಿದೆ ಎಂದರು.
ಗಾಣಿಗ ಸಮಾಜದ ಹಿರಿಯ ನಾಯಕರಾದ ಎಚ್. ಆರ್. ಉಟಗಿ ಮಾತನಾಡಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹುಟ್ಟು ಹೋರಾಟಗಾರರು, ಮಂಡಲ ಪಂಚಾಯತಿಯಿಂದ ಸಚಿವರಾದರೂ ರೈತ ನಾಯಕರಾಗೇ ಗುರುತಿಸಿಕೊಂಡವರು. ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಮೇಲಾಗಿ ಇಡೀ ನಮ್ಮ ಗಾಣಿಗ ಸಮುದಾಯ ಅವರ ಬೆನ್ನಿಗಿದೆ. ವಿಜಯಪುರ ಜಿಲ್ಲಾ ರಾಜಕಾರಣದಲ್ಲಿ ಗಾಣಿಗ ಸಮಾಜ ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿ ಬೆಳ್ಳುಬ್ಬಿ ಅವರಿಗೆ ಈ ಅವಕಾಶ ನೀಡಬೇಕು ಎಂದರು.
ಪ್ರಕಾಶ ಹಿಟ್ನಳ್ಳಿ, ಶರಣು ಕಾಖಂಡಕಿ, ಬಸವರಾಜ ಹಳ್ಳಿ, ಸಂತೋಷ ಕಕ್ಕಳಮೇಲಿ, ಹುಚ್ಚಪ್ಪ ಬಾಟಿ, ಶ್ರೀಮಂತ ಹಂಗರಗಿ, ಮಂಜುನಾಥ ತುಂಬರಮಟ್ಟಿ, ಆನಂದ ಬಿಸ್ಟಗೊಂಡ ಸೇರಿದಂತೆ ಹಲವು ಪ್ರಮುಖರಿದ್ದರು.