ಜೀವ ವೈವಿಧ್ಯತೆಯ ರಕ್ಷಣೆಯಿಂದ ಪರಿಸರದ ಸಮತೋಲನೆ
ಕಲಬುರಗಿ: ಮೇ.22:ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯಿಂದ ಅನೇಕ ಗಿಡ-ಮರಗಳು, ಸಸ್ಯ ಸಂಪತ್‍ತು, ಪ್ರಾಣಿ-ಪಕ್ಷಿಗಳು ನಾಶವಾಗುವ ಮೂಲಕ ಪರಿಸರದ ಅಸಮತೋಲನವಾಗುತ್ತಿದೆ. ಜೀವ ವೈವಿಧ್ಯತೆ ಮತ್ತು ಆಹಾರ ಸರಪಳಿ ಪರಸ್ಪರ ಪೂರಕ ಸಂಬಂಧಿಗಳಾಗಿದ್ದು, ಜೀವ ವೈವಿಧ್ಯತೆ ರಕ್ಷಣೆ ಮಾಡುವುದು ಅಗತ್ಯವಾಗಿದ್ದು, ಇದರಿಂದ ಪರಿಸರ ಸಮಲೋಲನೆ ಸಾಧ್ಯವಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿನ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜೀವವೈವಿಧ್ಯ ಸಮೃಧವಾಗಿರುವ ಸ್ಥಳಗಳನ್ನು ಸಂರಕ್ಷಿಬೇಕು. ಮಾನವ-ಪ್ರಾಣಿ ಸಂಘರ್ಷ ತಪ್ಪಿಸುವ ಕಾರ್ಯ ಜರುಗಬೆಕು. ಪ್ಲಾಸ್ಟಿಕ್, ರಸಗೊಬ್ಬರ, ಹಾನಿಕಾರಕ ರಾಸಾಯನಿಕಗಳ ಬಳಕೆ ತಗ್ಗಿಸುವುದು, ವಿವಿಧ ಮಾಲಿನ್ಯಗಳನ್ನು ತಡೆಗಟ್ಟುವುದು, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವುದು, ಸಾವಯುವ ಬೇಸಾಯ ಹೆಚ್ಚಳಗೊಳಿಸುವುದು, ಗಿಡ-ಮರಗಳು, ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವುದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೀವವೈವಿಧ್ಯತೆಯನ್ನು ಕಾಪಾಡಬಹುದಾಗಿದೆ ಎಂದರು.
ಮುಖ್ಯ ಶಿಕ್ಷಕಿ ಚಂಪಾಕಲಾ ಬಿರಾದಾರ ಮಾತನಾಡಿ, ಜಗತ್ತಿನ ಸಕಲ ಜೀವರಾಶಿಗಳಿಗೆ ಪರಿಸರವೇ ಆವಾಸ ಸ್ಥಾನವಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಪರಸ್ಪರ ಜೀವಿಗಳು ಪೂರಕವಾಗಿ ಸಂಬಂಧ ಹೊಂದಿರುತ್ತವೆ. ಪರಿಸರ ಸಮತೋಲನದಲ್ಲಿರಲು ಜೀವರಾಶಿಗಳು ಸಮತೋಲನವಾಗಿರಬೇಕು. ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಶಿಕ್ಷಕಿ ನಿಂಗಮ್ಮ ಬಿರಾದಾರ, ಗೀತಾ ಬಿರಾದಾರ, ಲತಾ ಬಿರಾದಾರ, ತಾರಾಬಾಯಿ ದುದನಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.