ಸಾಧನೆಯ ಹಾದಿ ಸುಗಮವಲ್ಲ
ಬ್ಯಾಡಗಿ,ಮೇ.22: ಸಾಧನೆಯ ಹಾದಿ ಸುಗಮವಲ್ಲ, ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಕರ್ನಾಟಕ ಅರಣ್ಯ ಅಭಿವೃಧ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಪಡೆದು ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ ಬ್ಯಾಡಗಿ ಪಟ್ಟಣದ ಬಿಇಎಸ್ ಪ್ರೌಢಶಾಲೆಯ ವಿದ್ಯಾರ್ಥಿ ಹೇಮಂತ ಛತ್ರದ, ತಾಲೂಕಿನ ಮೋಟೆಬೆನ್ನೂರ ಗ್ರಾಮದ ನವೋದಯ ವಿದ್ಯಾಸಂಸ್ಥೆಯ ವಿದ್ಯಾರ್ಥಿ ತರುಣ ಹಿರೇಮಠ ಹಾಗೂ ಕದರಮಂಡಲಗಿ ಗ್ರಾಮದ ಸ್ಪಂದನಾ ಪ್ರೌಢಶಾಲೆಯ ವಿದ್ಯಾರ್ಥಿ ನಿಖಿಲ್ ಬೆಳವಿಗಿ ಅವರುಗಳ ಮನೆಗಳಿಗೆ ತೆರಳಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಅದೇ ರೀತಿ ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಅತೀ ವೇಗವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ. ಪ್ರತಿಭೆ ಎಲ್ಲರಲ್ಲೂ ಇದೆ.ಆದರೆ ಆಗಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ಇವೆರಡರ ನಡುವೆ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದು ತಿಳಿಸಿದರಲ್ಲದೇ ತಾಲೂಕಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ. ಎಫ್. ಹುಲ್ಯಾಳ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಮಹಾದೇವ ಕರಿಯಣ್ಣನವರ, ರೈತ ಸಂಘದ ಮುಖಂಡ ಗಂಗಣ್ಣ ಎಲಿ, ಡಾ.ಪಿ.ಟಿ.ಲಕ್ಕಣ್ಣನವರ, ಬೀರಪ್ಪ ಬಣಕಾರ, ರಮೇಶ ಸುತ್ತಕೋಟಿ, ಮುನಾಫಅಹ್ಮದ್ ಯರೇಸಿಮಿ, ದುರ್ಗೇಶ ಗೋಣೆಮ್ಮನವರ, ಗಿರೀಶ ಇಂಡಿಮಠ, ರಾಜೀವ್ ಶಿಗ್ಲಿ, ಬಸವರಾಜ ಬಳ್ಳಾರಿ, ಶಾಸಕರ ಆಪ್ತ ಸಹಾಯಕ ನದಾಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.