ರಾಜಾ ರಾಮ್ ಮೋಹನರಾಯ್ ಶ್ರೇಷ್ಟ ಸಮಾಜ ಸುಧಾರಕ
ಕಲಬುರಗಿ:ಮೇ.22: ಹತ್ತೊಂಬತ್ತನೆ ಶತಮಾನದ ಭಾರತದ ಬೌದ್ಧಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಬೆಳವಣಿಗೆಯ ಸುಧಾರಣೆಯಲ್ಲಿ ಅದ್ವೀತಿಯವಾದ ಪಾತ್ರವನ್ನು ವಹಿಸಿದ ರಾಜಾ ರಾಮ್ ಮೋಹನರಾಯ, ‘ಆಧುನಿಕ ಸಮಾಜ ಸುಧಾರಣೆಯ ಪ್ರಾತಃಕಾಲದ ತಾರೆ’ಯಾಗಿದ್ದಾರೆ. ಅವರು ಶ್ರೇಷ್ಟ ಸಮಾಜ ಸುಧಾರಕರು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿನ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ರಾಜಾ ರಾಮ್ ಮೋಹನರಾಯ್’ರ 252ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಗನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮೋಹನರಾಯ್‍ರು ತಮ್ಮ 15ನೇ ವಯಸ್ಸಿನಲ್ಲಿಯೇ ಮೌಢ್ಯತೆ, ಗೊಡ್ಡು ಸಂಪ್ರದಾಯಗಳ ವಿರುದ್ದ ಪ್ರತಿಭಟಿಸಿದರು. ಇದಕ್ಕಾಗಿ ಸಂಪ್ರದಾಯಶರಣ ಮನೆತನವಾದ ತಮ್ಮ ಮನೆಯನ್ನು ತೊರೆಯಬೇಕಾಯಿತು. ‘ಬ್ರಹ್ಮ ಸಮಾಜ’ವನ್ನು ಸ್ಥಾಪಿಸಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದರು. ಏಕದೇವೋಪಾಸನೆ, ವಿಗ್ರಹ ಪೂಜೆ ವಿರೋಧ, ಸತಿ ಸಹಗಮನ ಪದ್ಧತಿಯ ನಿರ್ಮೂಲನೆ, ಬಹು ಪತ್ನಿತ್ವ ನಿಷೇಧ, ವಿಧವಾ ವಿವಾಹಕ್ಕೆ ಪ್ರೋತ್ಸಾಹದಂತಹ ಅನೇಕ ಕ್ರಾಂತಿಕಾರಕ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ದೇಶದ ಇತಿಹಾಸದಲ್ಲಿ ‘ಪುನರಜ್ಜೀವನದ ಪಿತಾಮಹ’ ಎಂದು ಕರೆಸಿಕೊಂಡಿದ್ದಾರೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾತನಾಡಿ, ರಾಜಾ ರಾಮ್ ಮೋಹನರಾಯ ಅವರು ಸಾಮಾಜಿಕ ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿ ಸಾಕಷ್ಟು ವಿರೋಧ, ನೊವುಗಳನ್ನು ಅನುಭವಿಸಿ, ಇವೆಲ್ಲವುಗಳನ್ನು ಮೆಟ್ಟಿ ನಿಂತು ಕ್ರಾಂತಿ ಮಾಡಿದ್ದು ಸಾಮಾನ್ಯವಾದದ್ದಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸೈಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಲಾ ಬಿರಾದಾರ, ಶಿಕ್ಷಕಿ ನಿಂಗಮ್ಮ ಬಿರಾದಾರ, ಗೀತಾ ಬಿರಾದಾರ, ಲತಾ ಬಿರಾದಾರ, ತಾರಾಬಾಯಿ ದುದನಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.