ನಿಗದಿತ ಅವಧಿಯೊಳಗೆ ಬೀಜ, ರಸಗೊಬ್ಬರ ಪೂರೈಸಿ
ಚನ್ನಮ್ಮನ ಕಿತ್ತೂರು,ಡಿ.22: ಮೇ.22, ರೈತರು ಮುಂಗಾರಿನ ಬಿತ್ತನೆಗಾಗಿ ಜಮೀನುಗಳನ್ನು ಸಜ್ಜುಗೊಳಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೈಗೆ ಬಾರದ ತುತ್ತು ಬಾಯಿಗೆ ಬರದಂತಾಗಿ ಅನ್ನದಾತ ಕೈ ಸುಟ್ಟುಕೊಂಡು ಪ್ರಸಕ್ತ ಹಂಗಾಮಿಗಾಗಿ ಭೂಮಿಗಳನ್ನು ಹಸನು ಮಾಡಿದ್ದಾರೆ ಎಂದು ಕೃಷಿ ಅಧಿಕಾರಿ ಬಸವರಾಜ ದಳವಾಯಿ ಹೇಳಿದರು.
ಕಿತ್ತೂರ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಪರಿಕರಗಳಾದ ಮಾರಾಟಗಾರರು ರೈತರಿಗೆ ತೊಂದರೆಯಾಗದಂತೆ ಗುಣಮಟ್ಟದ ಬೀಜ, ರಸಗೊಬ್ಬರ, ಕೀಟನಾಶಕ, ಕಳೆನಾಶಕಗಳನ್ನು ಸಕಾಲದಲ್ಲಿ ವಿತರಿಸಬೇಕು. ಹಾಗೂ ನಿಗದಿತ ದರದಲ್ಲಿ ರೈರತರಿಗೆ ವಿತರಿಸಲು ಪರಿಕರ ಮಾರಾಟ ಅಂಗಡಿಕಾರರಿಗೆ ತಿಳಿಸಿದರು. ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾವುದೆಂದರು.
ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿ ಮುಂಗಾರು ಆಶಾದಾಯಕವಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಬೀಜ, ರಸಗೊಬ್ಬರ, ಕೀಟನಾಶಕ ಸಕಾಲದಲ್ಲಿ ವಿತರಿಸಬೇಕೆಂದರು.
ಕೃಷಿ ಸಹಾಯಕ ಅಧಿಕಾರಿ ಮಂಜುನಾಥ ಕೆಂಚರಾವುತ ಮಾತನಾಡಿ ಅಧಿಕೃತ ಪರವಾನಗಿ ಪಡೆದು ಪರಿಕರ ಮಾರಾಟಗಾರರು ಮಾರಾಟ ಮಾಡಬೇಕು. ರೈತರಿಗೆ ರಶೀದಿಯನ್ನು ನೀಡಬೇಕು. ದಾಸ್ತಾನು ಖಾಲಿಯಾಗದಂತೆ ನೋಡಿಕೊಳ್ಳುವುದು ಪ್ರತಿವಾರ ರಸಗೊಬ್ಬರ ದಾಸ್ತಾನು ವಿವರಗಳನ್ನು ಕಛೇರಿಗೆ ತಿಳಿಸಬೇಕೆಂದು ನಿರ್ದೇಶನ ನೀಡಿದರು.
ಕೃಷಿ ಮಾರಾಟಗಾರರಾದ ಚಂದ್ರಗೌಡ ಪಾಟೀಲ ಮಾತನಾಡಿ ಎಲ್ಲಾ ಕೃಷಿ ಪರಿಕರಗಳ ಮಾರಾಟಗಾರರು ಇಲಾಖೆ ಹಾಗೂ ರೈತರೊಂದಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ಸಾಂಕೇತಿಕವಾಗಿ ರೈತರಿಗೆ ಗೋವಿನ ಜೋಳ ವಿತರಿಸಿದರು.
ಈ ವೇಳೆ ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ ಅಶ್ವಿನಿ ಎತ್ತಲಗುಡ್ಡ, ಕೃಷಿ ಇಲಾಖೆಯ ವಿಠ್ಠಲ ಹೊಂಗಲ, ವಿಶಾಲ ಅರಳಿಮರದ, ಜಗದೀಶ ನಾಗಯ್ಯಾ, ಹಾಗೂ ಕೃಷಿ ಪರಿಕರ ಮಾರಾಟಗಾರರು, ಇಲಾಖೆ ಸಿಬ್ಬಂದಿ, ರೈತರಿದ್ದರು.