ಸುರಿದ ಮಳೆಗೆ ಕೊಚ್ಚಿಹೋದ ರಸ್ತೆ, ಧರೆಗೆ ಬಿದ್ದ ಮರಗಳು. ಗೋಶಾಲೆಗೆ ನುಗ್ಗಿದ ಮಳೆ ನೀರು.
ಬಿ. ನಾಗರಾಜ. ಕೂಡ್ಲಿಗಿ.
ಕೂಡ್ಲಿಗಿ. ಮೇ.22 :- ಕಳೆದೆರಡು ದಿನದಿಂದ ಹಗಲು ಮತ್ತು ರಾತ್ರಿ ಸುರಿದ ಅಪಾರ ಮಳೆ, ಗಾಳಿಗೆ ತಾಲೂಕಿನಲ್ಲಿರುವ ಗಂಡಬೊಮ್ಮನಹಳ್ಳಿ ಗೋಶಾಲೆಗೆ ಮಳೆನೀರು ನುಗ್ಗಿ ಕೆಸರುಗದ್ದೆಯಂತಾಗಿದ್ದು   ಕೆಲವೆಡೆ ರಸ್ತೆಗಳು ಕೊಚ್ಚಿಹೋಗಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಮರಗಿಡಗಳು ರಸ್ತೆಗೆ ಅಡ್ಡಲಾಗಿ ನೆಲಕ್ಕೆ  ಉರುಳಿವೆ ಮತ್ತು ಬರದ ನಾಡಿನಲ್ಲಿ ಬತ್ತಿಹೋದ ಕೆರೆಕಟ್ಟೆಗಳಲ್ಲಿ ನೀರು ತುಂಬುವ ಮೂಲಕ ಅಂತರ್ಜಲ ಕುಸಿದ ಬೋರವೆಲ್ ಗಳು ಮತ್ತೆ ಪಿಕಪ್ ಆಗುತ್ತಿವೆ ಅಲ್ಲದೆ ಇದರಿಂದ  ದನಕರುಗಳಿಗೆ, ಕುಡಿಯುವ ನೀರಿಗೂ ಬರನೀಗಿದ್ದು  ರೈತರು ಮುಖದಲ್ಲಿ ಸಂತಸ ಉಕ್ಕಿ ಹರಿಯುತ್ತಿದ್ದು ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಬಿತ್ತನೆ ಕಾರ್ಯಕ್ಕೆ ಸಜ್ಜಾಗಿ ಬೀಜ ಗೊಬ್ಬರ ಪಡೆದುಕೊಳ್ಳಲು ಮುಂದಾಗಿದ್ದಾರೆ.
ತಾಲೂಕಿನ ಯಂಬಳಿ ವಡ್ಡರಹಟ್ಟಿ ಮತ್ತು  ಕೆಂಚಮಲ್ಲನಹಳ್ಳಿ ಹಾಗೂ ಆಲೂರು ಮತ್ತು ಯಂಬಳಿ ಗ್ರಾಮಗಳ ಮಧ್ಯದ ಸಂಪರ್ಕ ಹೊಂದಿರುವ ರಸ್ತೆಯು ಧಾರಾಕಾರವಾಗಿ ಸುರಿದ ಮಳೆಗೆ  ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತವಾಗಿದೆ ಅಲ್ಲದೆ, ಡಾಂಬರ್ ರಸ್ತೆಯು ಹಾಳಾಗಿದ್ದರಿಂದ ಹಲವು ಗ್ರಾಮಗಳ ಗ್ರಾಮಸ್ಥರ ಸಂಚಾರಕ್ಕೆ  ತೀವ್ರ ಅಡ್ಡಿಯಾಗಿದ್ದು ತುಂಬಾ   ತೊಂದರೆ ಎದುರಿಸುವಂತಾಗಿದೆ.
ತಾಲೂಕಿನ ಗುಂಡುಮುಣುಗು  ಮತ್ತು ಹುರುಳಿಹಾಳು ಮಧ್ಯೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವ ಹಿನ್ನೆಲೆ ಅದನ್ನು ತೆರವುಗೊಳಿಸುವವರೆಗೆ ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಗಿತ್ತು.   ಹೊಸಹಟ್ಟಿ ಜಯಮ್ಮ, ಮಾರಣ್ಣ, ಹುರುಳಿಹಾಳು ಮ್ಯಾಸರಹಟ್ಟಿಯ ಮಲ್ಲಮ್ಮ, ಸಣ್ಣೋಬಯ್ಯ, ಕುರಿಹಟ್ಟಿ ಎತ್ತಿನಮನೆ ಬೋರಣ್ಣ ಹಾಗೂ ಮಡಕಲಕಟ್ಟೆ, ಮಾಕನಡುಕು, ಕಂಚೋಬನಹಳ್ಳಿ, ಓಬಳಶೆಟ್ಟಿಹಳ್ಳಿ ಗ್ರಾಮಗಳು ಸೇರಿ 45ಕ್ಕೂ ಅಧಿಕ ತೋಟಗಳಲ್ಲಿ ಅಂದಾಜು 20 ಎಕರೆಗೂ ಹೆಚ್ಚಿನ ವೀಳ್ಯದೆಲೆ ಬಳ್ಳಿ ನೆಲಕ್ಕುರುಳಿವೆ. ಅದರಂತೆ, ಹೊಸಹಟ್ಟಿ ಭೋಗಣ್ಣ, ಹುರುಳಿಹಾಳು ಹೊಂಬಾಳೆ ಬಸವರಾಜಪ್ಪ, ಶೇಖರಪ್ಪ, ಲೋಕೇಶ್ ಅವರಿಗೆ ಸೇರಿದ ಪಪ್ಪಾಯಿ, ಕೊರಚರಹಟ್ಟಿ ಜಯಣ್ಣ, ಹುರುಳಿಹಾಳು ಚನ್ನಬಸಣ್ಣ ಅವರ ಟೊಮ್ಯಾಟೋ ಬೆಳೆಗಳು ಮಳೆಯಿಂದ ಸಂಪೂರ್ಣ ಹಾನಿಯಾಗಿವೆ. ಇದರಿಂದ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ಸ್ಥಳಕ್ಕೆ ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಧರೆಗೆ ವಿದ್ಯುತ್ ಕಂಬಗಳು: ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಬೆಳ್ಳಗಟ್ಟೆ, ಹುರುಳಿಹಾಳು ಸೇರಿ ನಾನಾ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆಯಾದರೂ ಯಾವುದೇ ಅಪಾಯ ಸಂಭವಿಸಿಲ್ಲ. ಒಟ್ಟಾರೆಯಾಗಿ ಮಳೆಯ ಆರ್ಭಟಕ್ಕೆ ರೈತರು ಸೇರಿ ಸಾರ್ವಜನಿಕರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮನೆಗಳಿಗೆ ನುಗ್ಗಿದ ನೀರು: ತಾಲೂಕಿನ ಕಾನಹಸೊಹಳ್ಳಿಯಲ್ಲಿ ಸುರಿದ ಭಾರಿ ಮಳೆಗೆ ಸರಕಾರಿ ಆಸ್ಪತ್ರೆಯ ಪಕ್ಕದ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಪೂರಾ ಜಾಗರಣೆ ಮಾಡುವಂತಾಗಿದೆ. ಅಲ್ಲದೆ, ಮನೆಯಲ್ಲಿದ್ದ ರಾಗಿ, ಜೋಳ, ಬಟ್ಟೆಗಳು ಸಂಪೂರ್ಣ ಹಾಳಾಗಿವೆ ಎಂದು ಅಲ್ಲಿನ ನಿವಾಸಿಗಳು ಗೋಳು ತೋಡಿಕೊಂಡರು. 
ಗೋಶಾಲೆಗೆ ನುಗ್ಗಿದ ನೀರು
ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿ ಬಳಿಯ ಗೋಶಾಲೆಯ ಶೆಡ್‌ಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದ ಶೆಡ್‌ಗಳು ಸಂಪೂರ್ಣವಾಗಿ ಕೆಸರುಗದ್ದೆಯಂತಾದ ಪರಿಣಾಮ ಜಾನುವಾರುಗಳನ್ನು ಹೊರಗೆ ಕಟ್ಟಿ ಮೇವು ಹಾಕಲಾಗುತ್ತಿದೆ. ಅಲ್ಲದೆ, ಸಂಗ್ರಹಿಸಿರುವ ಮೇವಿನ ಬಣವೆಗೂ ನೀರು ನುಗ್ಗಿದೆ.