ರಿಯಾಯಿತಿ ದರದಲ್ಲಿ ರೈತರಿಗೆ  ಬಿತ್ತನೆ ಬೀಜ.
ಸಂಜೆವಾಣಿ  ವಾರ್ತೆ
ಕೂಡ್ಲಿಗಿ. ಮೇ.22 :-  ತಾಲೂಕಿನ ಕೂಡ್ಲಿಗಿ ಸೇರಿದಂತೆ  ಗುಡೇಕೋಟೆ, ಕಾನಾಹೊಸಹಳ್ಳಿ ಹಾಗೂ ಕೊಟ್ಟೂರಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬಿತ್ತನೆಗೆ ಅಗತ್ಯ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದು, ರೈತರು ಇದರ  ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೂಡ್ಲಿಗಿ ಕೃಷಿ ಇಲಾಖೆಯ  ಸಹಾಯಕ ಕೃಷಿ ನಿರ್ದೇಶಕ ಎಂ.ಟಿ.ಸುನಿಲ್ ಕುಮಾರ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮಂಗಳವಾರ ಬಿತ್ತನೆ ಬೀಜ ವಿತರಿಸಿ ಮಾತನಾಡುತ್ತಾ  ಈಗ ರೈತ ಸಂಪರ್ಕ ಕೇಂದ್ರಗಳಲ್ಲಿ ಮೆಕ್ಕೆಜೋಳ, ತೊಗರಿ, ಜೋಳ ಸೇರಿ ಇತರೆ ಬಿತ್ತನೆ ಬೀಜಗಳ ದಾಸ್ತಾನು ಇದ್ದು, ರೈತರು ಅಗತ್ಯ ದಾಖಲೆಗಳನ್ನು ನೀಡಿ, ಬಾರ್ ಕೋಡ್ ಸ್ಕ್ಯಾನರ್  ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬಹುದಾಗಿದೆ. ಯಾವುದೇ ಕಾರಣಕ್ಕೂ ಬಿತ್ತನೆ ಬೀಜದ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ಕೈಗೊಂಡಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ಗುರುಬಸವರಾಜ, ಕೃಷಿ ಅಧಿಕಾರಿ ಸಾವಿತ್ರಿ ಸೇರಿ ರೈತರು ಇದ್ದರು.