ಪಿರಿಯಾಪಟ್ಟಣ ಬೆಟ್ಟದಪುರ ಮಳೆಯ ಅವಾಂತರ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.22:- ಪಿರಿಯಾಪಟ್ಟಣ ಬೆಟ್ಟದಪುರ ಮಳೆಯ ಅವಾಂತರ : ವಿವಿಧ ರಸ್ತೆಗಳು, ಜಮೀನುಗಳು ಜಾಲವೃತ ನಾಪತ್ತೆಯಾದ ಮೂರು ಹಸುಗಳು.
ಬೆಟ್ಟದಪುರ ಹಾಗೂ ಹಾರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಅಧ್ವಾನ ಸೃಷ್ಟಿಯಾಗಿದೆ.
ಮೂರು ದಿನಗಳಿಂದ ಸುರಿದಂತ ಧಾರಾಕಾರ ಮಳೆಗೆ ಹಾರನಹಳ್ಳಿಯಿಂದ ಚಿಕ್ಕನೇರಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹುಲಿಕೆರೆಯ ಬಳಿಯ ರಸ್ತೆ ಕುಸಿದು ಬಿದ್ದಿದೆ. ಈ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿ ಇಲ್ಲಿನ ಕೆರೆಯು ತುಂಬಿ ಕೋಡಿ ಬಿದ್ದಿತ್ತು, ಕೆರೆಯ ಬಳಿಯ ಡಾಂಬರು ರಸ್ತೆಯು ಸುಮಾರು 4-5 ಅಡಿ ಕುಸಿದು ಇಬ್ಭಾಗವಾಗಿದೆ.ಅಲ್ಲದೇ ಚಿಕ್ಕನೇರಳೆ ವ್ಯಾಪ್ತಿಯ ತರಿಕಲ್ಲು ಗ್ರಾಮದಲ್ಲಿ ಮಳೆಯ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆ ಕೆರೆ ಕೋಡಿ ಬಿದ್ದಿದೆ. ಇದರಿಂದ ಗ್ರಾಮದ ರೈತ ರೇವಣ್ಣ ಎಂಬುವರಿಗೆ ಸೇರಿದ ಮೂರು ಹಸುಗಳು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದು, ಇದುವರೆಗೂ ಯಾವುದೇ ಸುಳಿವು ಕೂಡ ಸಿಕ್ಕಿರುವುದಿಲ್ಲ.
ಈ ವ್ಯಾಪ್ತಿಯ ಚಿಕ್ಕನೇರಳೆ ಕೆರೆ, ಚಪ್ಪರದಹಳ್ಳಿ ಕೆರೆ, ಹಾರನಹಳ್ಳಿ ಕೆರೆ, ಹಳಿಯೂರು ಕಟ್ಟೆಹಳ್ಳ, ಅಂಬಲಾರೆ ಕೆರೆ, ಅಡಗೂರು ಕೆರೆ ಸೇರಿದಂತೆ ಹಲವಾರು ಗ್ರಾಮಗಳ ಕೆರೆ ಹಾಗೂ ಹಳ್ಳಗಳು ತುಂಬಿ ಕೋಡಿ ಬಿದ್ದಿವೆ. ರಾತ್ರೋರಾತ್ರಿ ಅಧಿಕಾರಿಗಳ ಭೇಟಿ ನೀಡಿದ್ದಾರೆ.
ಬೆಟ್ಟದಪುರ ಹಾಗೂ ಹಾರನಹಳ್ಳಿ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಅನಾಹುತಗಳು ಸಂಭವಿಸಿದ ಸ್ಥಳಗಳಿಗೆ ಅಧಿಕಾರಿಗಳು ಸೋಮವಾರ ರಾತ್ರೋರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ವಡ್ಡರಹೊಸಹಳ್ಳಿ, ತರಿಕಲ್ಲು ಹಾಗೂ ಹಾರನಹಳ್ಳಿ ಗ್ರಾಮಗಳ ಸ್ಥಳಕ್ಕೆ ತಹಸೀಲ್ದಾರ್ ಸುರೇಂದ್ರ ಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಸುನಿಲ್ ಕುಮಾರ್, ಕಂದಾಯ ನಿರೀಕ್ಷ ಆನಂದ್, ಪಿಡಿಒ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿಗಳಾದ ಪ್ರದೀಪ್, ದೀಪಕ್, ನವೀನ್ ರಾವ್ ಸೇರಿದಂತೆ ಸಿಬ್ಬಂದಿ ವರ್ಗದವರು ಸೋಮವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.
ಇದಲ್ಲದೆ ಮಂಗಳವಾರವು ಕೂಡ ಚಪ್ಪರದಹಳ್ಳಿ, ಹಾರನಹಳ್ಳಿ, ಅಡಗೂರು ಗ್ರಾಮಗಳಲ್ಲಿ ಮಳೆಯಿಂದ ಹಾನಿ ಉಂಟಾಗಿದೆ ಆ ಸ್ಥಳಗಳಿಗೆ ಸಂಬಂಧಪಟ್ಟ ಕೃಷಿ, ಕಂದಾಯ, ಪಂಚಾಯತ್ ರಾಜ್ ಇಲಾಖೆ, ಪಶು ಸಂಗೊಪನಾ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.