ನಿರಂತರ ಪರಿಶ್ರಮದಿಂದ ಸಾಧನೆ
ಸಂಜೆವಾಣಿ ನ್ಯೂಸ್
ಮೈಸೂರು, ಮೇ 22:- ಸ್ನಾತಕೋತ್ತರ ಶಿಕ್ಷಣದ ನಂತರ ಮುಂದಿನ ಭವಿಷ್ಯದ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಹೀಗಾಗಿ ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದು ಸ್ಟ್ರಾಂಗ್ ವಿಲ್ ಇಂಡಿಯಾ ಪ್ರೈ ಲಿ ವ್ಯವಸ್ಥಾಪಕಿ ಅಪೂರ್ವ ಅರುಣ್‍ಕುಮಾರ್ ತಿಳಿಸಿದರು.
ಮಂಗಳವಾರ ಶ್ರೀ ನಟರಾಜ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಪ್ಲೇಸ್‍ಮೆಂಟ್ ಸೆಲ್ (ಎಂ.ಕಾಂ.) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಹನದ ಕೌಶಲ್ಯದಿಂದ ಮಾತ್ರ ಉತ್ತಮ ಕೆಲಸ ಪಡೆಯಲು ಸಾಧ್ಯ. ಅವಕಾಶಗಳು ನಮಗಾಗಿ ಬರುತ್ತದೆಂದು ಕಾಯದೆ, ನಾವೇ ಅವಕಾಶಗಳ ಹಿಂದೆ ಸಾಗಬೇಕು. ಇದಕ್ಕಾಗಿ ಸಮಯ ಪರಿಪಾಲನೆ ಮುಖ್ಯ ಎಂದು ತಿಳಿಸಿದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಒಳ್ಳೆಯ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ಸಾಧ್ಯ. ಪ್ರಬುದ್ಧ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗೆ ಎಂದಿಗೂ ಸೋಲಿರುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯಕ್ಕೆ ಅಭಿವ್ಯಕ್ತಿಗೆ ಆದ್ಯತೆ ಇದೆ. ವಿವೇಕಾತ್ಮಕವಾದ ಹಾಗೂ ಆತ್ಮವಿಶ್ವಾಸದಿಂದ ಕೂಡಿದ ಮಾತುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅಳವಡಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಹಣಕ್ಕೆ-ಜಾತಿಗೆ ಅವಕಾಶವಿಲ್ಲ. ಬದಲಿಗೆ ಪ್ರತಿಭೆಗೆ ಮುಕ್ತ ಅವಕಾಶವಿದೆ. ಪ್ರತಿಭೆಯಿಂದ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ.ಎಂ.ಶಾರದ ವಹಿಸಿದ್ದರು. ಸಂಜನಾ ಹೆಚ್.ಆರ್., ತಕ್ವಿನ್ ಫಾತಿಮಾ ಹೆಚ್.ಆರ್ ಉಪಸ್ಥಿತರಿದ್ದರು.