ದುರ್ಗಾಮಾತೆ ರಕ್ಷಣಾತ್ಮಕ ಮಾತೃ ದೇವತೆ:ತಹಶಿಲ್ದಾರ ಕೀರ್ತಿ
ತಾಳಿಕೋಟೆ:ಮೇ.22: ಶ್ರೀ ದುರ್ಗಾ ದೇವತೆಯು ರಕ್ಷಣಾತ್ಮಕ ಮಾತೃ ದೇವತೆಯಾಗಿದ್ದು ಉಗ್ರ ರೂಪವಾಗಿದ್ದು ತುಳಿತಕ್ಕೊಳಗಾದವರ ವಿಮೋಚನೆಗಾಗಿ ದುಷ್ಟರವಿರೂದ್ದ ತನ್ನ ದೈವಿಕ ಕೋಪವನ್ನು ಬಿಚ್ಚಿಡುತ್ತಾಳೆ ಮತ್ತು ಸೃಷ್ಠಿಯನ್ನು ಸಶಕ್ತಗೊಳಿಸಲು ವಿನಾಷವನ್ನುಂಟು ಮಾಡುತ್ತಾಳೆಂದು ತಾಲೂಕಾ ತಹಶಿಲ್ದಾರರಾದ ಶ್ರೀಮತಿ ಕೀರ್ತಿ ಚಾಲಕ ಅವರು ಹೇಳಿದರು.
ಮಂಗಳವಾರರಂದು ಸ್ಥಳೀಯ ಹರಳಯ್ಯ ಸಮಾಜ ಬಾಂದವರ ವತಿಯಿಂದ ಏರ್ಪಡಿಸಲಾದ ಶ್ರೀ ದುರ್ಗಾದೇವಿ ಜಾತ್ರೋತ್ಸವದಲ್ಲಿ ಸಮಾಜ ಬಾಂದವರ ವತಿಯಿಂದ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ದುರ್ಗಾದೇವಿಯು ಅತ್ಯಂತ ಪ್ರಸಿದ್ದ ಅವತಾರ ಮತ್ತು ಹಿಂದೂ ದೇವತಾ ಸಂಗ್ರಹದಲ್ಲಿ ಶಕ್ತಿ ದೇವತೆಯ ಮುಖ್ಯ ರೂಪಗಳ ಪೈಕಿ ಈ ಒಬ್ಬ ದೇವತೆಯಾಗಿದ್ದಾಳೆಂದರು. ಅಂತಹ ದೇವತೆಯ ಜಾತ್ರೋತ್ಸವವನ್ನು ಪ್ರತಿವರ್ಷ ಹರಳಯ್ಯ ಸಮಾಜ ಬಾಂದವರು ಆಚರಿಸಿಕೊಂಡು ಬರುತ್ತಿರುವದು ಸಂತಸದ ಸಂಗತಿಯಾಗಿದೆ ಎಂದ ಅವರು ಭಕ್ತಿ ಭಾವದಿಂದ ಈ ದೇವತೆಗೆ ನಡೆದುಕೊಂಡವರಿಗೆ ಯಾವುದೂ ಕಡಿಮೆಯಾಗಲಾರದು ಕಾರಣ ಎಲ್ಲರೂ ತಮ್ಮ ಮಕ್ಕಳಿಗೆ ಈ ದೇವತೆಯ ಭಕ್ತಿ ಮಾರ್ಗವನ್ನು ತೋರಿ ಸಮಾಜದ ಎಲ್ಲ ಮಕ್ಕಳಿಗೆ ಶಿಕ್ಷಣವಂತರನ್ನಾಗಿ ರೂಪಿಸುವ ಕಾರ್ಯ ಮಾಡಲು ಮುಂದಾಗಬೇಕೆಂದು ಹೇಳಿದ ತಹಶಿಲ್ದಾರ ಕೀರ್ತಿ ಚಾಲಕ ಅವರು ಶಿಕ್ಷಣ ಒಂದರಿಂದಲೇ ಬೇಕಾದುದ್ದನ್ನು ಸಾದಿಸಬಹುದಾಗಿದೆ ಎಂದು ಶ್ರೀ ದೇವಿಯ ಮಹಾತ್ಮೆ ಕುರಿತು ವಿವರಿಸಿದರು.
ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ಹರಳಯ್ಯ ಸಮಾಜದ ಪರಿಚಯ ನನಗೇನು ಹೊಸದೇನಲ್ಲಾ ಈ ಸಮಾಜದ ಹಿರಿಯ ದಿ.ವಿಜಾಪೂರ ಶಿಕ್ಷಕರವರು ನನಗೆ 4ನೇ ತರಗತಿಯಲ್ಲಿ ಓದಿಸಿದ್ದು ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಅವರು ಹೊಡೆ ಬಡಿ ಮಾಡಿ ಶಿಕ್ಷಣಕ್ಕೆ ಒತ್ತು ನೀಡಿದ್ದೇ ಇಂದು ನಾನು ಮೇಲ್ಮಟ್ಟಕ್ಕೇರಲು ಕಾರಣವಾಗಿದೆ ಎಂದರು. ಹರಳಯ್ಯ ಸಮಾಜ ಬಾಂದವರು ಸಮಾಜಕ್ಕಾಗಿ ಶ್ರಮಿಸುತ್ತಿರುವ ಯುವ ಸಂಘಟಿಕರಿಗೆ ಹಾಗೂ ಹಿತೈಷಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಿ ಅವರನ್ನು ಮೇಲ್ಮಟ್ಟಕ್ಕೇತ್ತುವ ಕಾರ್ಯ ಮಾಡುತ್ತಾ ಸಾಗಿದರೆ ಸಮಾಜದ ಏಳಿಗೆಯಾಗಲು ಸಾದ್ಯ ನಾ ಮುಂದೆ ನೀ ಮುಂದೆ ಎಂಬ ಭಾವನೆ ಬೇಡಾ ಎಲ್ಲರೂ ಸೌಮ್ಯ ಸ್ವರೂಪದಿಂದ ಸಾಗಿಬಂದ ಈ ಸಮಾಜದ ಬಗ್ಗೆ ನನಗೂ ಸಹ ಕಳಕಳಿ ಇದೆ ಸಮಾಜದ ಹಿತದೃಷ್ಠಿಗಾಗಿ ಹೋರಾಟವಾಗಲಿ ಯಾವುದೇ ತರಹದ ಸೇವಾ ಕಾರ್ಯಕ್ಕಾಗಲಿ ನನಗೆ ಅಹ್ವಾನಿಸಿದರೆ ಸಾಕು 24 ಗಂಟೆಗಳ ಕಾಲಾವಧಿಯಲ್ಲಿಯೂ ಸಮಾಜ ಸೇವಾ ಕಾರ್ಯದಲ್ಲಿ ನಾನುಕೂಡಾ ಬಾಗಿಯಾಗಲು ಸಿದ್ದನಿದ್ದೇನೆಂದ ಘೋರ್ಪಡೆ ಅವರು ಶ್ರೀ ದೇವಿಯ ಶಕ್ತಿಯಿಂದಲೇ ದೇಶ ಉಳಿದಿದೆ ಅಂತಹ ಶಕ್ತಿಯ ದೇವತೆಯಾದ ಶ್ರೀ ದುರ್ಗಾ ಪರಮೇಶ್ವರಿಯ ಸೇವಾ ಕಾರ್ಯ ಮಾಡುತ್ತಾ ಜಾತ್ರೋತ್ಸವವನ್ನು ಆಚರಿಸುತ್ತಾ ಸಾಗಿರುವದು ಹರ್ಷತಂದಿದೆ ಇಂತಹ ಕಾರ್ಯಕ್ಕೆ ಇನ್ನೂ ಹೆಚ್ಚಿಗೆ ಪ್ರೋತ್ಸಾಹಿಸುವ ಕಾರ್ಯ ಎಲ್ಲರೂ ಮಾಡಬೇಕೆಂದರು.
ಕಾರ್ಯಕ್ರಮದ ಮೊದಲಿಗೆ ಸುಮಂಗಲೆಯರ ಕುಂಭಮೇಳ, ಫಲ್ಲಕ್ಕಿ ಉತ್ಸವದೊಂದಿಗೆ ಶ್ರೀ ದುರ್ಗಾದೇವಿ ಮಹಾ ಮೂರ್ತಿಯ ರಥೋತ್ಸವದ ಭವ್ಯ ಮೇರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ದೇವತೆಯ ಮಂದಿರ ತಲುಪಿತು.
ನಂತರ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಮಸ್ತ ಭಕ್ತಾದಿಗಳಿಗೆ ಮಹಾ ಪ್ರಸಾದ ವಿತರಿಸಲಾಯಿತು.
ಈ ಸಮಯದಲ್ಲಿ ರಾಜಶೇಖರ ವಿಜಾಪೂರ, ರಾಘವೇಂದ್ರ ವಿಜಾಪೂರ, ಪರಶುರಾಮ ವಿಜಾಪೂರ, ಆನಂದ ವಿಜಾಪೂರ, ಪರಶುರಾಮ ಇಲಕಲ್ಲ, ಕೃಷ್ಣಾ ಮಂಬ್ರುಮಕರ, ಚಿಂತಾಮಣಿ ವಿಜಾಪೂರ, ಗೋಪಾಲ ವಿಜಾಪೂರ, ರವಿ ಇಲಕಲ್ಲ, ಕಾಶಿನಾಥ ಮಬ್ರುಮಕರ, ಮಹಾಂತೇಶ ಇಲಕಲ್ಲ, ಶೇಖಪ್ಪ ವಿಜಾಪೂರ, ಮೊದಲಾದವರು ಇದ್ದರು.